ಗುಬ್ಬಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಬಸ್ ಪಲ್ಟಿಯಾಗಿದ್ದು, ಅದೃಷ್ಠವಷಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗುದ್ದಾರೆ.
ಗುಬ್ಬಿ ತಾಲೂಕಿನ ಎಂ.ಎಚ್ ಪಟ್ಟಣ ಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಸರ್ಕಾರಿ ಬಸ್ ಪಲ್ಟಿಯಾದ ಘಟನೆ ಸಂಭವಿಸಿದ್ದು, ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಗುಬ್ಬಿಯಿಂದ ತುಮಕೂರು ಕಡೆಗೆ ತೆರಳುತ್ತಿದ್ದ ತಿಪಟೂರು ಡಿಪೋಗೆ ಸೇರಿದ KA 06 F 1253 ಹೊಸದುರ್ಗ–ಬೆಂಗಳೂರು ಎಕ್ಸ್ಪ್ರೆಸ್ ಸರ್ಕಾರಿ ಬಸ್ಗೆ ತಾಂತ್ರಿಕ ದೋಷ ಉಂಟಾದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಬಸ್ನಲ್ಲಿ ಅಳವಡಿಸಲಾಗಿದ್ದ ಸ್ಟೀರಿಂಗ್ ಆಕ್ಸೆಲ್ ಅಕಸ್ಮಾತ್ ತುಂಡಾಗಿ ನಿಯಂತ್ರಣ ತಪ್ಪಿದ ಬಸ್ ಎಂ.ಎಚ್ ಪಟ್ಟಣ ಸಮೀಪದ ಸರ್ವಿಸ್ ರಸ್ತೆಯಲ್ಲಿ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಅಪಘಾತದ ವೇಳೆ ಬಸ್ನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದರೂ, ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣ ಸ್ಥಳೀಯರ ಸಹಾಯದಿಂದ ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆ ತಿಳಿದು ಕೂಡಲೇ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸುವ ಜೊತೆಗೆ ರಸ್ತೆ ಸಂಚಾರವನ್ನು ಸಹ ನಿಯಂತ್ರಿಸಿದರು.

ಇನ್ನೂ ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಗೋಪಾಲ್, ಗುಬ್ಬಿ ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರೆದಿದೆ.





