ತುಮಕೂರು: ಬರದನಾಡು ಎಂದೇ ಖ್ಯಾತಿಯಾಗಿರುವ ಪಾವಗಡ ಇದೀಗ ಗಡಿ ದಾಟಿ ಮಾನವೀಯ ಸೇವೆಗೆ ಮುಂದಾಗಿದೆ. ಕೇರಳದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೀಡಾದ ಸಂತ್ರಸ್ತರ ನೆರವಿಗೆ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಸಹಾಯಹಸ್ತ ಚಾಚಿದೆ.

ಶ್ರೀ ರಾಮಕೃಷ್ಣ ಸೇವಾಶ್ರಮದ ಜಪಾನಂದ ಜೀ ಮಹಾರಾಜ್ ನೇತೃತ್ವದಲ್ಲಿ, ಇನ್ಫೋಸಿಸ್ ಫೌಂಡೇಶನ್ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ನೆರವಿನೊಂದಿಗೆ ಕೇರಳದ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳ 3 ಸಾವಿರ ಕಿಟ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ.

ಕಳೆದ ಒಂದು ವಾರದಿಂದ ನೂರಾರು ಸ್ವಯಂಸೇವಕರು ಹಾಗೂ ಭಕ್ತಾದಿಗಳು ಕಿಟ್‌ಗಳ ಪ್ಯಾಕಿಂಗ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 6 ಸಾವಿರ ರೂ. ಮೌಲ್ಯದ ಪ್ರತಿ ಕಿಟ್‌ನಲ್ಲಿ ದಿನಸಿ ವಸ್ತುಗಳು, ಬಟ್ಟೆ, ಟಾರ್ಪಾಲು, ಸೋಲಾರ್ ಲೈಟ್, ಬೆಡ್‌ಶೀಟ್, ಪ್ಲಾಸ್ಟಿಕ್ ಬಕೆಟ್, ಮಾಸ್ಕ್ ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ಸೇರಿಸಲಾಗುತ್ತಿದೆ.

ಸಿದ್ಧಪಡಿಸಿರುವ ಕಿಟ್‌ಗಳನ್ನು ಜಪಾನಂದ ಜೀ ಮಹಾರಾಜ್ ಖುದ್ದಾಗಿ ಕೇರಳಕ್ಕೆ ತೆರಳಿ ವಿತರಿಸಲು ನಿರ್ಧರಿಸಿದ್ದಾರೆ. ಪ್ರವಾಹದಿಂದ ನಿಜವಾಗಿಯೂ ಸಂಕಷ್ಟಕ್ಕೊಳಗಾದ ಕುಟುಂಬಗಳನ್ನು ಗುರುತಿಸಿ, ಕುಗ್ರಾಮಗಳಿಗೂ ತೆರಳಿ ನೆರವು ತಲುಪಿಸುವ ಉದ್ದೇಶವನ್ನು ಆಶ್ರಮ ಹೊಂದಿದೆ.

ಸಂತ್ರಸ್ತರ ಅಗತ್ಯಗಳನ್ನು ತಿಳಿದುಕೊಂಡು ಅವರಿಗೆ ಬೇಕಾದ ರೀತಿಯಲ್ಲಿ ಪೂರ್ಣ ಪ್ರಮಾಣದ ನೆರವು ನೀಡುವುದು ಆಶ್ರಮದ ಪರಂಪರೆ ಎಂದು ಜಪಾನಂದ ಜೀ ಮಹಾರಾಜ್ ತಿಳಿಸಿದ್ದಾರೆ.

ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸೇವಾಶ್ರಮದ ಸೇವೆ ಇದೇ ಮೊದಲಲ್ಲ. ಗುಜರಾತ್ ಭೂಕಂಪ, ಪಾಂಡಿಚೇರಿ ಹಾಗೂ ಚೆನ್ನೈ ಸುನಾಮಿ ಮತ್ತು ವಿವಿಧ ಪ್ರವಾಹಗಳ ಸಂದರ್ಭದಲ್ಲೂ ಆಶ್ರಮ ಸಂತ್ರಸ್ತರ ನೆರವಿಗೆ ಧಾವಿಸಿದೆ. ದೇಶದ ಹಲವು ರಾಜ್ಯಗಳಲ್ಲಿ ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಆಶ್ರಮ, ಇದೀಗ ಗಡಿ ರಾಜ್ಯ ಕೇರಳದಲ್ಲೂ ಸಂಕಷ್ಟದಲ್ಲಿರುವ ಜನರ ನೆರವಿಗೆ ನಿಂತಿದೆ.

ರಾಜ್ಯಗಳ ಗಡಿ ಬೇರೆಬೇರೆ ಇದ್ದರೂ ಮಾನವೀಯತೆಗೆ ಯಾವುದೇ ಗಡಿಯಿಲ್ಲ ಎಂಬುದನ್ನು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತೊಮ್ಮೆ ಸಾಬೀತುಪಡಿಸಿದೆ.

LEAVE A REPLY

Please enter your comment!
Please enter your name here