ಬೆಂಗಳೂರು : ಬಿಡದಿ ಟೌನ್ಶಿಪ್ ಯೋಜನೆಗಾಗಿ ಯಾವುದೇ ರೈತನ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀನು ನೀಡಲು ಇಚ್ಛಿಸದ ರೈತರು ತಮ್ಮ ಭೂಮಿಯಲ್ಲಿ ಎಂದಿನಂತೆ ಕೃಷಿ ಮುಂದುವರಿಸಬಹುದು. ಸ್ವಇಚ್ಛೆಯಿಂದ ಭೂಮಿ ನೀಡಲು ಸಿದ್ಧರಿರುವ ರೈತರಿಗೆ ಮಾತ್ರ ಸರ್ಕಾರ ಪರಿಹಾರ ನೀಡಿ ಭೂಮಿ ಪಡೆಯಲಿದೆ ಎಂದು ಹೇಳಿದರು.
ಯೋಜನೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗುವುದು. ರೈತರ ಅಭಿಪ್ರಾಯ ಮತ್ತು ಆತಂಕಗಳನ್ನು ಆಲಿಸಿದ ಬಳಿಕ ಸಮಿತಿಯ ವರದಿ ಆಧರಿಸಿ ಸಂಪುಟ ಸಭೆಯಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಭೂಮಿ ನೀಡದ ರೈತರ ಜಮೀನಿನ ಯಥಾಸ್ಥಿತಿಯನ್ನು ಯಾವುದೇ ರೀತಿಯಲ್ಲಿ ಬದಲಾಯಿಸುವುದಿಲ್ಲ ಎಂದು ಭರವಸೆ ನೀಡಿದರು.
ಬಿಡದಿಯಲ್ಲಿ ಜಮೀನು ಸರ್ವೆ ವೇಳೆ ನಡೆದ ಹಿಂಸಾಚಾರವನ್ನು ಖಂಡಿಸಿದ ಮುಖ್ಯಮಂತ್ರಿ, ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದು ದುಃಖಕರ. ಕೆಲವರು ರಾಜಕೀಯ ಉದ್ದೇಶದಿಂದ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಡದಿ ಟೌನ್ಶಿಪ್ ಯೋಜನೆ ತಮ್ಮ ಕನಸಿನ ಯೋಜನೆಯಲ್ಲ. ಇದು ಹಿಂದಿನ ಸರ್ಕಾರಗಳು ಆರಂಭಿಸಿದ್ದ ಯೋಜನೆಯಾಗಿದ್ದು, ತಾವು ಅದನ್ನು ಮುಂದುವರಿಸುತ್ತಿದ್ದೇವೆ ಅಷ್ಟೇ ಎಂದು ಹೇಳಿದರು. ತಾವು ಕೂಡ ರೈತನ ಮಗನಾಗಿದ್ದು, ರೈತರ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.
ಈ ಯೋಜನೆಗೆ ಸಂಬಂಧಿಸಿದಂತೆ ಹಿಂದಿನ ಸರ್ಕಾರಗಳು ಪ್ರದೇಶವನ್ನು ‘ರೆಡ್ ಝೋನ್’ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಿದ್ದವು. ಬಳಿಕ ಡಿಎಲ್ಎಫ್ ಕಂಪನಿಗೆ ಯೋಜನೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿತ್ತು ಹಾಗೂ 2010ರಲ್ಲಿ ಪಿಪಿಪಿ ಮಾದರಿಯಲ್ಲಿ ಜಾಗತಿಕ ಟೆಂಡರ್ ಕೂಡ ಆಹ್ವಾನಿಸಲಾಗಿತ್ತು ಎಂದು ಮುಖ್ಯಮಂತ್ರಿ ವಿವರಿಸಿದರು.



