ಆ್ಯಂಕರ್ : ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಸಮೀಪದ ಜಿಗಣಿ ಪಾಳ್ಯದ ಬಳಿ ನಡೆದಿದೆ.
ತುಮಕೂರು ಕಡೆಯಿಂದ ಮಂಡ್ಯ ಕಡೆಗೆ ತೆರಳುತ್ತಿದ್ದ ಕೆಎ 11 N 1211 ಸಂಖ್ಯೆಯ ಆಲ್ಟೊ ಕಾರು ಹಾಗೂ ಕುಣಿಗಲ್ ಕಡೆಯಿಂದ ತುಮಕೂರು ಕಡೆ ಬರುತ್ತಿದ್ದ ಕೆಎ 03 ಡಿ 5599 ಸಂಖ್ಯೆಯ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಕುಮಾರ್ ನರಸಿಂಹಸ್ವಾಮಿ (65), ಅವರ ಪತ್ನಿ ಗಾಯತ್ರಿ (60), ತಂಗಿ ಗಾಯತ್ರಿ (55) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಕಾರು ಚಾಲಕ ಕೂಡ ಸಾವನ್ನಪ್ಪಿದ್ದು, ಅವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.
ಮೃತರು ಮಂಡ್ಯ ಜಿಲ್ಲೆಯ ಸುವರ್ಣಸಂದ್ರ ಮೂಲದವರಾಗಿದ್ದು, ವಿವಾಹ ವಾರ್ಷಿಕೋತ್ಸವ ಹಿನ್ನೆಲೆ ನಿನ್ನೆ ದೇವರಾಯನದುರ್ಗಕ್ಕೆ ತೆರಳಿದ್ದರು. ಇಂದು ಊರಿಗೆ ವಾಪಸ್ಸಾಗುವ ವೇಳೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕುಣಿಗಲ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಾಧ್ಯ ನಾಯಕ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





