ಗುಬ್ಬಿ : ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆ ಎಲ್ಲೇ ಹೋದರೂ ನಿಮಗೆ ಯಶಸ್ಸು ತಂದುಕೊಡುತ್ತದೆ ಎಂದು ಪ್ರಭಾರ ತಾಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಆಶಿಸಿದರು.

ಪಟ್ಟಣದ ತಾಲೂಕಿನ ಆರೋಗ್ಯ ಇಲಾಖೆಯ ವತಿಯಿಂದ ಸಾರ್ವಜನಿಕ ಆರೋಗ್ಯ ಕಚೇರಿ ಸಭಾಂಗಣದಲ್ಲಿ ವರ್ಗಾವಣೆಗೊಂಡ ಡಾ.ಬಿ.ಸಿ.ಬಿಂದು ಮಾಧವ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಡಾ.ಬಿ.ಸಿ.ಬಿಂದು ಮಾಧವ ಅವರ ಸೇವಾ ಅವಧಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಶ್ಲಾಘಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ವಿಸ್ತರಣೆ, ಸಾರ್ವಜನಿಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಹಾಗೂ ವಿವಿಧ ಆರೋಗ್ಯ ಯೋಜನೆಗಳ ಯಶಸ್ವಿ ಅನುಷ್ಠಾನದಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಬೀಳ್ಕೊಡುಗೆ ಸ್ವೀಕರಿಸಿದ ಡಾ.ಬಿ.ಸಿ.ಬಿಂದು ಮಾಧವ ಮಾತನಾಡಿ, ಆರೋಗ್ಯ ಸೇವೆಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ತಂಡದ ಸಹಕಾರವೇ ನನ್ನ ಯಶಸ್ಸಿಗೆ ಕಾರಣ. ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲಾ ಸಿಬ್ಬಂದಿ, ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು.
ನಿಟ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜಶೇಖರ್ ಮಾತನಾಡಿ, ಡಾ.ಬಿಂದು ಮಾಧವ ಸರಳ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಇವರು ತಮ್ಮ ಕರ್ತವ್ಯವನ್ನು ನಿಷ್ಠೆ, ಪ್ರಾಮಾಣಿಕತೆ ಮತ್ತು ಮಾನವೀಯತೆಯಿಂದ ನಿರ್ವಹಿಸಿ, ಜನರ ವಿಶ್ವಾಸವನ್ನು ಗಳಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಆರೋಗ್ಯ ಸೇವೆಗಳು ಸಮರ್ಪಕವಾಗಿ ತಲುಪುವಂತೆ ಶ್ರಮಿಸಿ, ಅನೇಕ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವರ್ಗಾವಣೆ ಗೊಂಡ ವೈದ್ಯರಾದ ಡಾ.ರಾಮಕೃಷ್ಣಪ್ಪ, ಡಾ.ಸವಿತ, ದ್ವಿತೀಯ ದರ್ಜೆ ಗುಮಾಸ್ತ ನಾಗರಾಜು ಇವರನ್ನು ಅಭಿನಂದಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ, ಇಲಾಖೆಯ ಅಧಿಕಾರಿಗಳು, ವೈದ್ಯರು, ಪ್ರಯೋಗಶಾಲಾ ತಂತ್ರಜ್ಞರು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಅಶಾ ಕಾರ್ಯಕರ್ತರು, ಸಿಬ್ಬಂದಿ, ಹಾಗೂ ಸಾರ್ವಜನಿಕರು ಮತ್ತಿತರರು ಇದ್ದರು. ಕಾರ್ಯಕ್ರಮವನ್ನು ರಮೇಶ್ ಸ್ವಾಗತಿಸಿ, ತುಳಸಿಬಾಯಿ ನಿರೂಪಿಸಿ, ಜಗದೀಶ್ ವಂದಿಸಿ, ಹೆಚ್.ರಮ್ಯ ವೈದ್ಯರ ಕಿರುಪರಿಚಯ ಮಾಡಿದರು.





