ಗುಬ್ಬಿ : ವಿಕಲಚೇತನರ ಕಲ್ಯಾಣಕ್ಕಾಗಿ ಕಾಯ್ದಿರಿಸುವ ಶೇ. 5ರಷ್ಟು ನಿಧಿಯನ್ನು ಬಳಸಿಕೊಂಡು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಬೈಕ್‌ಗಳನ್ನು ವಿತರಿಸಲಾಯಿತು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲ್ಲೂಕು ಪಂಚಾಯತಿ ಅನಿರ್ಬಂಧಿತ ಗ್ರಾಂಟ್ ಅಡಿಯಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ಕಾಯ್ದಿರಿಸಿದ ಶೇಕಡಾ 5ರಷ್ಟು ನಿಧಿಯಲ್ಲಿ ತಾಲ್ಲೂಕಿನ 31 ವಿಕಲಚೇತನರಿಗೆ ತ್ರಿಚಕ್ರ ಬೈಕ್ ವಿತರಿಸಿ ಮಾತನಾಡಿ, ಸ್ವಾವಲಂಬನೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೆಲಸಕ್ಕೆ ಹೋಗುವವರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ವಯಂ ಉದ್ಯೋಗ ಮಾಡುವ ಅರ್ಹ ವಿಕಲಚೇತನರಿಗೆ ಮೊದಲ ಆದ್ಯತೆ ನೀಡಿ ವಾಹನ ವಿತರಿಸಲಾಗಿದೆ. 

ಮುಂದಿನ ದಿನದಲ್ಲಿ ತಾಲೂಕಿನಲ್ಲಿ ಸರ್ವೆ ಮಾಡಿ ಉಳಿದವರಿಗೆ ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಶಾಸಕರ ಅನುದಾನದಲ್ಲಿ ತಾಲೂಕಿನಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ತ್ರಿಚಕ್ರ ಮೋಟಾರು ಬೈಕ್ ಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ವೈದ್ಯರ ಕೊರತೆ ಇದ್ದು, ಈಗಿನ ಮುಖ್ಯಮಂತ್ರಿ ಅವರು ಖಾಲಿ ಸ್ಥಳಗಳಿಗೆ ವೈದ್ಯರನ್ನು ತುಂಬಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಮುಂದಿನ ದಿನದಲ್ಲಿ ಖಾಲಿ ಇರುವ ಜಾಗಕ್ಕೆ ವೈದ್ಯರನ್ನು ತುಂಬಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ  ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಶಿವಾಜಿ, ಸತೀಶ್, ರಾಜಣ್ಣ, ಶಿವನಂಜಪ್ಪ,  ರಮೇಶ್, ತಾಲೂಕು ಪಂಚಾಯಿತಿ ಇಒ  ಜೆ.ಬಿ.ರಂಗನಾಥ್, ತಾಲೂಕು ಯೋಜನಾಧಿಕಾರಿ ಜಗನ್ನಾಥ್ ಗೌಡ, ದಿವ್ಯಾಂಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಯರಾಮಯ್ಯ, ಬಿ.ಟಿ ಗಿರೀಶ್ ಕುಮಾರ್, ನಟರಾಜು, ಗೋವಿಂದ್, ಫಲಾನುಭವಿಗಳು, ವಿ ಆರ್ ಡಬ್ಲ್ಯೂ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here