ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ ಪ್ರಕರಣ ಅಂತ್ಯಕ್ರಿಯೆ ವಿವಾದ..

ತುಮಕೂರು : ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಮೃತ ತಾಯಿ ಹಾಗೂ ಇಬ್ಬರು ಮಕ್ಕಳ ಅಂತ್ಯಕ್ರಿಯೆಯನ್ನು ಮುಸ್ಲಿಂ ಜಾಮಿಯಾ ಖಬರಸ್ತಾನದಲ್ಲಿ ನಡೆಸಲಾಗಿದೆ. ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದ ಸಾಮಾಜಿಕ ಕಾರ್ಯಕರ್ತರಿಗೆ ಇದೀಗ ಬೆದರಿಕೆ ಕರೆಗಳು ಬರಲು ಆರಂಬಿಸಿದ್ದು ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ…..ಏನಿದು ಅಂತ್ಯಕ್ರಿಯೆ ವಿವಾದ ನೋಡ್ಕಂಡು ಬನ್ನಿ..

ತುಮಕೂರು ಜಿಲ್ಲೆಯ ಶಿರಾ ಮೂಲದ ಮುಸ್ಲಿಂ ಮಹಿಳೆ ರಾಬಿಯಾ ತನ್ನ ಪತಿ ನಿಧನದ ಬಳಿಕ ಬಾಡಿಗೆ ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ಬಾಡಿಗೆ ಕಟ್ಟಲಾಗದೆ ಸ್ವಂತ ಮನೆಗಾಗಿ ತನ್ನ ಎರಡು ಮಕ್ಕಳನ್ನ ಬೆನ್ನಿಗೆ ಕಟ್ಟಿಕೊಂಡು ನೇರವಾಗಿ ಹೊರಾಟಕ್ಕೆ ದುಮುಕಿದ್ದಳು. ಸರ್ಕಾರದಿಂದ ಮನೆ ನಿರ್ಮಿಸಿಕೊಡುವಂತೆ ಅಂದಿನ ಸಿಎಂ ಸಿದ್ದರಾಮಯ್ಯ ಅವರಿದ್ದ ವೇದಿಕೆ ಬಳಿ ತೆರಳಿ ನೇರವಾಗಿ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದರು. ನಂತರ ಜನಸ್ಪಂದನ ಸಭೆಯಲ್ಲಿ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಗೆ ಪ್ರಶ್ನಿಸಿ ದಯಾಮರಣ ಕೋರಿ ಅರ್ಜಿ ಸಲ್ಲಿಸಿ ಸುದ್ದಿಯಾಗಿದ್ದರು. ಹಲವು ಹೋರಾಟದ ಬಳಿಕ ಪರಿಸ್ಥಿಯನ್ನ ಅರಿತು ಡಾ ಜಿ ಪರಮೇಶ್ವರ್ ಅವರೆ ಸ್ವತಃ ರಾಬಿಯಾಗೆ ಮನೆ ಬಾಡಿಗೆ ಕಟ್ಟಲು ಹಣ ನೀಡಿದ್ದರು. ಬಳಿಕ ಜಿಲ್ಲಾಡಳಿತದಿಂದ ಶಿರಾ ನಗರದ ಪೌರಕಾರ್ಮಿಕರ ಬಡಾವಣೆಯಲ್ಲಿ ನಿವೇಶನ ನೀಡಿ ಮನೆ ನಿರ್ಮಾಣಕ್ಕೂ ಸಹಾಯ ಮಾಡಲಾಗಿತ್ತು. ಹೊಸ ಮನೆಯಲ್ಲಿ ಹೊಸ ಜೀವನ ಆರಂಬಿಸಿದ್ದ ರಾಬಿಯಾ ಕಳೆದ ಬುಧವಾರ ರಾತ್ರಿ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಶಿರಾದಿಂದ ತುಮಕೂರು‌ ಜಿಲ್ಲಾ ಶವಗಾರಕ್ಕೆ ಮೃತ ದೇಹಗಳನ್ನ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.

ಮರಣೋತ್ತರ ಪರೀಕ್ಷೆಯ ನಂತರ ತಾಯಿ ಹಾಗೂ ಇಬ್ಬರು ಮಕ್ಕಳ ಮೃತದೇಹಗಳನ್ನು ಅಂತ್ಯಕ್ರಿಯೆ ನಡೆಸಲು ಸಮಸ್ಯೆ ಎದುರಾಗಿತ್ತು. ರಾಬಿಯಾ ಅವರ ಹುಟ್ಟೂರು ಚಿಕ್ಕನಾಯಕನಹಳ್ಳಿ ಹಾಗೂ ಪತಿಯ ಊರಾದ ಶಿರಾದಲ್ಲಿ ಅಂತ್ಯಕ್ರಿಯೆ ನಡೆಸಲು ವಿರೋಧ ವ್ಯಕ್ತವಾಗಿತ್ತು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅರಿತ ಪೊಲೀಸರು ತುಮಕೂರಿನಲ್ಲೆ ಅಂತ್ಯಕ್ರಿಯೆ ನಡೆಸಲು ಅನುವು ಮಾಡಿಕೊಟ್ಟಿದ್ದರು. ಅದರಂತೆ ಸಾಮಾಜಿಕ ಕಾರ್ಯಕರ್ತ ಜಾಹಿರ್ ಹಾಗೂ ಅವರ ತಂಡ ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ ಜಾಮಿಯಾ ಖಬರಸ್ತಾನದಲ್ಲಿ ಮೃತದೇಹಗಳ ಅಂತ್ಯಕ್ರಿಯೆ ನಡೆಸಿದ್ದಾರೆ‌.

ಮೃತ‌ ಮಹಿಳೆ ರಾಬಿಯಾ..

ಆದರೆ, ಇದೀಗ ಈ ಅಂತ್ಯಕ್ರಿಯೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮತ್ತು ಆಕ್ಷೇಪ ವ್ಯಕ್ತವಾಗುತ್ತಿದೆ. ರಾಬಿಯಾ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರೂ, ಪತಿ ನಿಧನದ ಬಳಿಕ ಶ್ರೀಕಾಂತ್ ಎಂಬುವವರೊಂದಿಗೆ ಸಹಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಅಲ್ಲದೆ ತಾಳಿ, ಹೂ ಮತ್ತು ಕುಂಕುಮ ಧರಿಸುತ್ತಿದ್ದರು ಎಂಬ ಕಾರಣ ನೀಡಿ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂಬ ಆರೋಪವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿದ್ದಾರೆ. “ಅನ್ಯಧರ್ಮದ ಮಹಿಳೆಗೆ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ” ಎಂದು ಆರೋಪಿಸಿ ವಾಟ್ಸಾಪ್ ಸಂದೇಶಗಳನ್ನು ಹರಿಬಿಡಲಾಗುತ್ತಿದೆ ಎನ್ನಲಾಗಿದೆ. ತುಮಕೂರಿನ ಉಲಮಾಗಳು ಹಾಗೂ ಸಮಾಜದ ಮುಖಂಡರು ಈ ಕುರಿತು ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂಬ ಒತ್ತಾಯವೂ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.

ಇದೇ ವೇಳೆ, ಅಂತ್ಯಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಾಮಾಜಿಕ ಕಾರ್ಯಕರ್ತರಾದ ಜಹೀರ್ ಹಾಗೂ ನೂರ್ ಅವರ ಮೊಬೈಲ್ ಸಂಖ್ಯೆಗಳನ್ನೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೊಬೈಲ್ ಸಂಖ್ಯೆಗಳು ವೈರಲ್ ಆದ ನಂತರ ಇಬ್ಬರಿಗೂ ನಿರಂತರವಾಗಿ ಕರೆ ಮಾಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ಜಹೀರ್ ಮತ್ತು ನೂರ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಜೀವಕ್ಕೆ ಹಾಗೂ ಕುಟುಂಬದ ಸುರಕ್ಷತೆಗೆ ಆತಂಕ ವ್ಯಕ್ತಪಡಿಸಿರುವ ಇಬ್ಬರೂ ಸಾಮಾಜಿಕ ಕಾರ್ಯಕರ್ತರು ಪೊಲೀಸರ ಮೊರೆ ಹೋಗಿದ್ದು, ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಒಟ್ಟಾರೆ, ಪತಿ ನಿದನದ ಬಳಿಕ ಹೋರಾಟದಿಂದಲೇ ಬದುಕು ಕಟ್ಟಿಕೊಂಡಿದ್ದ ರಾಬಿಯಾ ಅಂತ್ಯಕ್ರಿಯೆ ಹೊಸ ವಿವಾದಕ್ಕೆ ಕಾರಣವಾಗಿದೆ. ರಾಬಿಯಾ ಮತ್ತು ಮಕ್ಕಳನ್ನ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಸಾಮಾಜಿಕ ಕಾರ್ಯಕರ್ತರಿಗೆ ಇದೀಗ ಬೆದರಿಕೆ ಆರೋಪ ಕೇಳಿ ಬಂದಿರುವುದು ತುಮಕೂರಿನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here