ಗುಬ್ಬಿ: ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಸೈಕಲ್ ಮೇಲೆ ಕುಳಿತು ಆಟವಾಡುತ್ತಿದ್ದ 13 ವರ್ಷದ ಬಾಲಕನ ಮೇಲೆ ಎಲೆಕ್ಟ್ರಿಕ್ ಕಾರು ಹರಿದು ಸಾವನ್ನಪ್ಪಿರುವ ಘಟನೆ ನಡೆದಿದೆ.
ನಿಟ್ಟೂರಿನ “ರಾಘವೇಂದ್ರ ಟೆಕ್ಸ್‌ಟೈಲ್” ಮಾಲೀಕರಾದ ಮೊಹನ್ ಕುಮಾರ್ ಅವರ ಪುತ್ರ ” ಶೋಭಿತ್ ರಾಘವ್”ಶಾಲೆಗೆ ರಜೆ ಇದ್ದರಿಂದ ಪೋಷಕರು ಮಗುವನ್ನು ಅಂಗಡಿಗೆ ಕರೆದುಕೊಂಡು ಬಂದಿದ್ದರು. ಬೆಳಗ್ಗೆ ಅಂಗಡಿ ಮುಂದೆ ರಸ್ತೆ ಬದಿಯಲ್ಲಿ ಸೈಕಲ್ ಮೇಲೆ ಕುಳಿತು ಆಟವಾಡುತ್ತಿದ್ದ ಸಂದರ್ಭದಲ್ಲಿ, ಏಕಾಏಕಿ ಬಂದ ಎಲೆಕ್ಟ್ರಿಕ್ ಕಾರು ನಿಯಂತ್ರಣ ತಪ್ಪಿ ಬಾಲಕನ ಮೇಲೆ ಹರಿದಿದೆ.
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಆತಂಕಗೊಂಡು ಮಗುವನ್ನು ರಕ್ಷಿಸಲು ಧಾವಿಸಿದ್ದು, ತಕ್ಷಣವೇ ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರು. ಆದರೆ ಗಾಯಗಳ ತೀವ್ರತೆಗೆ ಮಗು ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದು, ವೈದ್ಯರು ಮೃತ ಎಂದು ಘೋಷಿಸಿದರು.
ಘಟನೆಯ ನಂತರ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಮಗುವಿನ ಅಕಾಲಿಕ ಮರಣದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪೋಷಕರ ದುಃಖ ಗ್ರಾಮಸ್ಥರ ಕಣ್ಣೀರು ತರಿಸಿದೆ. ಸ್ಥಳೀಯರು ರಸ್ತೆ ಸುರಕ್ಷತೆ ಮತ್ತು ವೇಗ ನಿಯಂತ್ರಣದ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ಕಾರಣವಾದ ಕಾರು ಮತ್ತು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.





