ತುಮಕೂರು: ಪತಿ ಮನೆಯಿಂದ ಹೊರಗೆ ಹೋದ ಸಮಯವನ್ನೇ ಗಮನಿಸಿ ಮನೆಗೆ ನುಗ್ಗಿ, ಚಾಕು ತೋರಿಸಿ ಮಹಿಳೆ ಹಾಗೂ ಎಂಟು ತಿಂಗಳ ಮಗುವಿಗೆ ಬೆದರಿಕೆ ಹಾಕಿ, ಖಾಸಗಿ ಫೋಟೋಗಳನ್ನು ತೆಗೆದು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪಿಯನ್ನ ಪಾವಗಡ ಪೊಲೀಸರು ಬಂದಿಸಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪತಿ ಹೊರಗೆ ಹೋದಾಗ ಮನೆಗೆ ನುಗ್ಗುತ್ತಿದ್ದ ಆರೋಪ
ಸಂತ್ರಸ್ತೆಯ ಆರೋಪದ ಪ್ರಕಾರ, ಪತಿ ಕೆಲಸಕ್ಕೆ ತೆರಳುತ್ತಿದ್ದ ಸಮಯವನ್ನು ಗಮನಿಸುತ್ತಿದ್ದ ಪಕ್ಕದ ಮನೆಯ ಮಂಜು ಎಂಬಾತ, ಮನೆಯಲ್ಲಿ ಮಹಿಳೆ ಒಬ್ಬಳೇ ಇರುವ ಸಂದರ್ಭವನ್ನು ಬಳಸಿಕೊಂಡು ಮನೆಗೆ ಬರುತ್ತಿದ್ದ ಎನ್ನಲಾಗಿದೆ.
ಒಂದು ಸಂದರ್ಭದಲ್ಲಿ ಚಾಕು ಹಿಡಿದು ಮನೆಗೆ ನುಗ್ಗಿದ ಆರೋಪಿ, ಮಹಿಳೆ ಹಾಗೂ ಎಂಟು ತಿಂಗಳ ಮಗುವಿಗೆ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಇದರಿಂದ ಮಹಿಳೆ ತೀವ್ರ ಭಯಕ್ಕೆ ಒಳಗಾಗಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಸಂತ್ರಸ್ತೆಯ ಅವರ ಹೇಳಿಕೆಯ ಪ್ರಕಾರ, ಆರೋಪಿಯ ಕಿರುಕುಳದಿಂದಾಗಿ ತಾವು ಮಾನಸಿಕವಾಗಿ ನೊಂದಿದ್ದು, ಘಟನೆ ಕುರಿತು ಕುಟುಂಬಸ್ಥರ ಬಳಿ ನೋವು ತೋಡಿಕೊಂಡಿದ್ದಾರೆ.
ಖಾಸಗಿ ಫೋಟೋ ತೆಗೆದು ಬ್ಲ್ಯಾಕ್ಮೇಲ್ ಆರೋಪ
ಚಾಕು ತೋರಿಸಿ ಬೆದರಿಸಿದ ಬಳಿಕ ಮಹಿಳೆಯ ಖಾಸಗಿ ಫೋಟೋಗಳನ್ನು ತೆಗೆದುಕೊಂಡು, ಅವುಗಳನ್ನು ಮುಂದಿಟ್ಟುಕೊಂಡು ಪದೇಪದೇ ಬೆದರಿಕೆ ಹಾಗೂ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಪತಿ ಮನೆಯಿಂದ ಹೊರಗೆ ಹೋದ ಸಂದರ್ಭಗಳಲ್ಲಿ ಮತ್ತೆ ಮನೆಗೆ ಬಂದು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಇದಲ್ಲದೆ, ಆರೋಪಿಯ ಮೊಬೈಲ್ನಲ್ಲಿ ಇತರ ಮಹಿಳೆಯರು ಹಾಗೂ ಮಕ್ಕಳಿಗೆ ಸಂಬಂಧಿಸಿದ ಖಾಸಗಿ ಫೋಟೋ-ವಿಡಿಯೋಗಳಿರಬಹುದು ಎಂಬ ಅನುಮಾನವನ್ನೂ ಸಂತ್ರಸ್ತೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸರು ಆರೋಪಿಯ ಮೊಬೈಲ್ ಸೇರಿದಂತೆ ಡಿಜಿಟಲ್ ಸಾಧನಗಳನ್ನು ಪರಿಶೀಲಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ದೂರು ಬಳಿಕ ಫೋಟೋ-ವಿಡಿಯೋ ಡಿಲೀಟ್ ಮಾಡಿರುವ ಅನುಮಾನ
ಸಂತ್ರಸ್ತೆಯ ಚಿಕ್ಕಪ್ಪ ಗಂಗರಾಜು ಅವರ ಆರೋಪದ ಪ್ರಕಾರ, ಆರೋಪಿ ಖಾಸಗಿ ಫೋಟೋಗಳನ್ನು ತೋರಿಸಿ ಮಹಿಳೆಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಪ್ರಕರಣದ ಬಗ್ಗೆ ದೂರು ದಾಖಲಾಗಿದೆ ಎಂಬ ವಿಚಾರ ತಿಳಿದ ಬಳಿಕ ಆರೋಪಿಯ ಮೊಬೈಲ್ನಲ್ಲಿದ್ದ ಕೆಲವು ಫೋಟೋ ಹಾಗೂ ವಿಡಿಯೋಗಳನ್ನು ಅಳಿಸಿರುವ ಸಾಧ್ಯತೆಯಿದೆ ಎಂಬ ಅನುಮಾನವನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ.
ಆರೋಪಿಯ ಮೊಬೈಲ್ ಹಾಗೂ ಇತರೆ ಡಿಜಿಟಲ್ ಸಾಧನಗಳ ಸಮಗ್ರ ಪರಿಶೀಲನೆ ನಡೆಸಿದರೆ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿ ಬೆಳಕಿಗೆ ಬರಬಹುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸದ್ಯ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತೆ ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಆರೋಪಿಯ ಬಳಿ ಇತರ ಮಹಿಳೆಯರ ಖಾಸಗಿ ಫೋಟೋ ಅಥವಾ ವಿಡಿಯೋಗಳಿವೆಯೇ? ಅವುಗಳನ್ನು ಬಳಸಿಕೊಂಡು ಬೇರೆ ಯಾರಿಗಾದರೂ ಕಿರುಕುಳ ನೀಡಲಾಗಿದೆಯೇ? ಎಂಬ ಪ್ರಶ್ನೆಗಳೂ ಇದೀಗ ಎದುರಾಗಿವೆ.
ಆದರೆ ಈ ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದಲೇ ಖಚಿತವಾಗಬೇಕಿದೆ. ಆರೋಪ ಸಾಬೀತಾಗುವವರೆಗೆ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಲಾಗುವುದಿಲ್ಲ.
ವರದಿ: ಮಂಜುನಾಥ್, ತುಮಕೂರು




