ತುಮಕೂರು: ನಗರದಲ್ಲಿ ಮೇ 4 ರಿಂದ ಅಂತರಾಷ್ಟ್ರೀಯ ಮಹಿಳಾ ಟೆನ್ನಿಸ್ ಕ್ರೀಡಾಕೂಟ ನಡೆಯಲಿದ್ದು ಭರ್ಜರಿ ಸಿದ್ದತೆ ನಡೆದಿದೆ. ತುಮಕೂರು ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಟೂರ್ನಿಗೆ ದೇಶ-ವಿದೇಶಗಳಿಂದ ಆಟಗಾರ್ತಿಯರು ಆಗಮಿಸಿದ್ದು, ಟ್ರೈಯಲ್ಸ್ ಹಂತದ ಪಂದ್ಯಗಳು ಈಗಾಗಲೇ ಶುರುವಾಗಿದೆ.

ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಕ್ರೀಡಾಕೂಟದ ವೆಬ್‌ಸೈಟ್‌ಗೆ ಚಾಲನೆ ನೀಡಿ, ಕ್ವಾಲಿಫೈ ಪಂದ್ಯಗಳನ್ನು ವೀಕ್ಷಿಸಿದರು. ಇದೇ ವೇಳೆ ಕ್ರೀಡಾಂಗಣದ ಸೌಲಭ್ಯಗಳು ಹಾಗೂ ಆಸನ ವ್ಯವಸ್ಥೆಯನ್ನು ಪರಿಶೀಲಿಸಿದರು. ಜಿಲ್ಲಾಧಿಕಾರಿ ಹಾಗೂ ತುಮಕೂರು ಎಸ್ಪಿ ಸಚಿವರಿಗೆ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ತುಮಕೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜನೆ ಹೆಮ್ಮೆಯ ವಿಷಯವಾಗಿದ್ದು, ಜಿಲ್ಲೆಯ ಕ್ರೀಡಾ ಬೆಳವಣಿಗೆಗೆ ಇದು ದೊಡ್ಡ ಹೆಜ್ಜೆ ಎಂದರು. ಈಗಾಗಲೇ ವಿವಿಧ ದೇಶಗಳಿಂದ ಸುಮಾರು 70 ಕ್ರೀಡಾಪಟುಗಳು ಆಗಮಿಸಿದ್ದಾಗಿ ತಿಳಿಸಿದರು. ಪೋಷಕರು ಮಕ್ಕಳಿಗೆ ಕ್ರೀಡೆಯಲ್ಲಿ ಉತ್ತೇಜನ ನೀಡಬೇಕು ಎಂದು ಕರೆ ನೀಡಿದರು.

ಆದರೆ ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಈ ಕ್ರೀಡಾಕೂಟಕ್ಕೂ ತಟ್ಟಿದೆ. ಮೂಲತಃ ಭಾರತ ಸೇರಿದಂತೆ 19 ರಾಷ್ಟ್ರಗಳ ಆಟಗಾರ್ತಿಯರು ಭಾಗವಹಿಸಬೇಕಾಗಿದ್ದರೂ, ಪ್ರಸ್ತುತ 7 ರಾಷ್ಟ್ರಗಳ ಆಟಗಾರ್ತಿಯರು ಮಾತ್ರ ಭಾಗಿಯಾಗಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಆಟಗಾರ್ತಿಯರು ಗೈರಾಗಿರುವುದು ಗಮನಾರ್ಹ.

ಮೇ 10ರವರೆಗೆ ನಡೆಯಲಿರುವ ಈ ಟೂರ್ನಿಗೆ 30 ಸಾವಿರ ಅಮೆರಿಕನ್ ಡಾಲರ್ (ಸುಮಾರು ₹28 ಲಕ್ಷ) ಬಹುಮಾನ ಘೋಷಿಸಲಾಗಿದೆ. ಸಿದ್ಧಾರ್ಥ ಶಿಕ್ಷಣ ಸಂಸ್ಥೆ ವತಿಯಿಂದ ಬಹುಮಾನ ವಿತರಣೆ ನಡೆಯಲಿದೆ.

ತುಮಕೂರಿನಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವೂ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ.

ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.


LEAVE A REPLY

Please enter your comment!
Please enter your name here