ಬೆಂಗಳೂರು :‌ ಪೊಲೀಸ್ ಇಲಾಖೆಯಲ್ಲಿ ಎಚ್ಚರಿಕೆ ವಹಿಸುವಂತೆ ಹಿರಿಯ ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು ಕೊಟ್ಟಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದ ನಿವಾಸದಲ್ಲಿ, ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ಅಜಯ್ ಹಿಲೋರಿ, ವಂಶಿಕೃಷ್ಣ ಅವರೊಂದಿಗೆ ಪ್ರಕರಣದ ಕುರಿತು ಚರ್ಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 7.11 ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಏಳು ಆರೋಪಿಗಳನ್ನು ಬೆಂಗಳೂರು ನಗರ ಪೊಲೀಸರು ಹಿಡಿದಿದ್ದಾರೆ. ಇನ್ನು ಕೆಲವರು ಸಿಗಬೇಕಿದೆ. ಪ್ರಕರಣದಲ್ಲಿ ಇಲಾಖೆಯ ಒಬ್ಬ ವ್ಯಕ್ತಿ ಭಾಗಿಯಾಗಿದ್ದ. ಮೂರು ವಿಶೇಷ ತಂಡಗಳು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರು ಸೇರಿದಂತೆ ಪ್ರಕರಣದ ಜವಾಬ್ದಾರಿ ವಹಿಸಿಕೊಂಡ ಇಬ್ಬರು ಜಂಟಿ ಪೊಲೀಸ್ ಆಯುಕ್ತರಿಗೆ, ಇಬ್ಬರು ಡಿಸಿಪಿಗಳು ಮತ್ತು 200ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಬೆಂಗಳೂರಿನಲ್ಲಿ ಇಂಥ ಘಟನೆಯಾದಾಗ ಯಾರು ಕೂಡ ನಂಬಲು ಸಾಧ್ಯವಾಗಿರಲಿಲ್ಲ. ಬೆಂಗಳೂರಿಗೆ ಕೆಟ್ಟ ಹೆಸರು ಬರುವ ರೀತಿ ಕೃತ್ಯ ಅಗಿತ್ತು.‌ ಈ ಘಟನೆ ಪೊಲೀಸ್ ಇಲಾಖೆಗೂ ಸವಾಲಾಗಿತ್ತು. 6.29 ಕೋಟಿ ರೂ. ಹಣ ಸಿಕ್ಕಿದೆ. ಬಾಕಿ ಹಣ ಪತ್ತೆಹಚ್ಚುತ್ತಾರೆ.

ಈ ಪ್ರಕರಣ ಪೊಲೀಸ್ ಇಲಾಖೆಗೆ ಸವಾಲಾಗಿತ್ತು. ತಾಂತ್ರಿಕವಾಗಿ, ಬಹಳ ಎಚ್ಚರಿಕೆಯಿಂದ ಬುದ್ಧಿ ಉಪಯೋಗಿಸಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕೆಲಸ ಮಾಡಿ ಪ್ರಕರಣವನ್ನು ಭೇದಿಸಿದ್ದಾರೆ. ದರೋಡೆ ಮಾಡಿದವರು ಬಹಳ ಎಚ್ಚರಿಕೆಯಿಂದ ಕೃತ್ಯ ಎಸಗಿದ್ದರು. ಅದೆಲ್ಲವೂ ಕೂಡ ಈಗ ತನಿಖೆಯಿಂದ ಗೊತ್ತಾಗುತ್ತಿದೆ.

ತಾವು ಕೂಡ ಬಹಳ ಇಲಾಖೆಯನ್ನು ಎಚ್ಚರಿಸುವ ರೀತಿಯಲ್ಲಿ ಸುದ್ದಿಗಳನ್ನು ಮಾಡಿದ್ದಿರಿ. ಘಟನೆಗೆ ಸಂಬಂಧಿಸಿದಂತೆ ಇನ್ನುಮುಂದೆ ಇಲಾಖೆಯಲ್ಲಿ ಎಚ್ಚರಿಕೆಯಿಂದ ಇರಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ರೀತಿಯ ಕೃತ್ಯದಲ್ಲಿ ಯಾರಾದರು ಭಾಗಿಯಾಗುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಇಲಾಖೆಯ ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ನಿನ್ನೆ ಕೋರಮಂಗಲದಲ್ಲಿಯೂ ಘಟನೆ ನಡೆದಿದೆ. ಅರೆಸ್ಟ್ ಮಾಡಿದ್ದಾರೆ ಎಂದು ತಿಳಿಸಿದರು.

ಏಜೆನ್ಸಿಯವರು ಆರ್‌ಬಿಐ ಮಾರ್ಗಸೂಚಿಗಳನ್ನು ಪಾಲಿಸಿದ್ದಾರೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇದಕ್ಕೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

LEAVE A REPLY

Please enter your comment!
Please enter your name here