ಗುಬ್ಬಿ :  ತಾಲ್ಲೂಕಿನ ಕಸಬಾ ಹೋಬಳಿ ಕೋಡಿತೋಟ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ಅಮ್ಮನವರ ಜಾತ್ರಾ ಮಹೋತ್ಸವ ಗುರುವಾರ ರಾತ್ರಿ ಅದ್ದೂರಿಯಾಗಿ ಜರುಗಿತು.

ಜಾತ್ರೆಯ ಅಂಗವಾಗಿ ಬೆಳಗ್ಗೆಯಿಂದ ಸಂಜೆಯವರೆಗೂ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ರಾತ್ರಿ ಮೂಲ ದೇವರಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಉತ್ಸವ  ಅಮ್ಮನವರಿಗೆ ವಿವಿಧ ಬಗೆಯ ಹೂವು ಹಾಗೂ ವಸ್ತ್ರಗಳಿಂದ ಅಲಂಕಾರ ಮಾಡಿ ಊರಿನ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ, ಸಿಡಿ ಮುದ್ದಿನೊಂದಿಗೆ ಉತ್ಸವ ನಡೆಸಲಾಯಿತು. ನಂತರ ದೇವರ ಜೊತೆಯಲ್ಲಿ ಪ್ರತಿ ಮನೆಯಿಂದ ಸಿಂಗಾರ ಮಾಡಿದ ಆರತಿಗಳನ್ನು ದೇವಸ್ಥಾನದ ಹತ್ತಿರ ಕರೆ ತರಲಾಯಿತು. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನ ಅಭಿವೃದ್ಧಿ ಸಮಿತಿಯ  ಅಧ್ಯಕ್ಷ ಗಂಗರೇವಣ್ಣ ಮಾತನಾಡಿ, ಶ್ರೀ ಲಕ್ಷ್ಮಿದೇವಿ  ಕಾಲದಿಂದಲೂ ಇಲ್ಲಿ ನೆಲೆಸಿದ್ದು, ಪ್ರತಿ ವರ್ಷವೂ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ. ಇಲ್ಲಿಗೆ ಬರುವ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂದರು.

ಉಪನ್ಯಾಸಕ ಚಂದ್ರಶೇಖರ್ ಮಾತನಾಡಿ, ಜಾತ್ರಾ ಮಹೋತ್ಸವವನ್ನು ಕಾರ್ತಿಕ ಮಾಸದ ಕೊನೆಯಲ್ಲಿ ವಿಶೇಷವಾಗಿ ಮಾಡಲಾಗುತ್ತದೆ. 19 ವರ್ಷಗಳ ಹಿಂದೆ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ ಎಂದು ತಿಳಿಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಯಜಮಾನ್ ನರಸಿಂಹಮೂರ್ತಿ, ಮಾಜಿ ಛೇರ್ಮನ್ ರೇವಣ್ಣ,  ಮುಖಂಡರಾದ ದೇವಸ್ಥಾನ ಸಮಿತಿ  ಅಧ್ಯಕ್ಷ ಗಂಗರೇವಣ್ಣ, ಕಾರ್ಯದರ್ಶಿ ನರಸಿಂಹಮೂರ್ತಿ, ಪದಾಧಿಕಾರಿಗಳಾದ ರೇವಣ್ಣ, ಬ್ಯಾಟರಾಜು, ತಿಮ್ಮರಾಜು, ಲೋಕೇಶ್, ಪ್ರಧಾನ ಅರ್ಚಕ ಮೂರ್ತಿ, ಕುಮಾರ್ ಸೇರಿದಂತೆ ಅಕ್ಕಪಕ್ಕದ ಭಕ್ತರು ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here