ಗುಬ್ಬಿ : ಪಟ್ಟಣದಲ್ಲಿ ಮೇ 25ನೇ ಸೋಮವಾರದಂದು ಬಸವ ಜಯಂತಿಯನ್ನು ಬಸವ ಜಯಂತಿ ಆಚರಣಾ ಸಮಿತಿ ವತಿಯಿಂದ ಅದ್ದೂರಿಯಾಗಿ ನಡೆಸಲಾಗುತ್ತದೆ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ತಿಳಿಸಿದರು.

ಪಟ್ಟಣದ ಹೊರವಲಯದ ಗುರುಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಜಯಂತಿಯ ಅಂಗವಾಗಿ ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಸ್ಥಾನದ ಆವರಣದಿಂದ ಶ್ರೀ ನಾಗಲಿಂಗೇಶ್ವರ ದೇವಸ್ಥಾನದವರೆಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಬಸವೇಶ್ವರರ ಪುತ್ತಳಿಯನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ತಾಲೂಕಿನಿಂದ 30 ನಂದಿ ಧ್ವಜಗಳು, ವೀರಗಾಸೆ ಕುಣಿತ, ಲಿಂಗದ ವೀರರ ಕುಣಿತ ಹಾಗೂ ಇನ್ನೂ ಮುಂತಾದ ಜಾನಪದ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಗುತ್ತದೆ. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಬಂಧುಗಳಿಗೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ದಾಸೋಹದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಶೇಖರ್ ಬಾಬು ಮಾತನಾಡಿ, ಸಮುದಾಯದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.

ಸಮಾಜದ ಮುಖಂಡ ಎಂ. ಸಿ ಹಿತೇಶ್ ಮಾತನಾಡಿ, ಬಸವ ಜಯಂತಿ ಹಾಗೂ ಬಸವತತ್ವ ಚಿಂತನ ಸಮಾರಂಭಕ್ಕೆ ಗವಿಮಠ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು, ದೊಡ್ಡಗುಣಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ತೆವಡೇಹಳ್ಳಿ ಮಠದ ಶ್ರೀ ಗೋಸಲ ಚೆನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ಸ್ವಾಮೀಜಿ, ತೊರೆಮಠದ ಅಟವೀ ಚನ್ನಬಸವ ಸ್ವಾಮೀಜಿಗಳು ಆಶೀರ್ವಚನ ನೀಡುವರು.

ಬಸವ ಜಯಂತಿ ಆಚರಣೆ ಸಮಿತಿಯ ಅಧ್ಯಕ್ಷ ಎಸ್ ಮಂಜುನಾಥ್ ಮಾತನಾಡಿ,ಹೇರೂರಿನ ಶ್ರೀ ಗುರುಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಬೆಳಿಗ್ಗೆ 6.30ಕ್ಕೆ ಷಟ್ ಸ್ಥಲ ಧ್ವಜಾರೋಹಣದೊಂದಿಗೆ ಇಷ್ಟಲಿಂಗ ಪೂಜೆಯಬನ್ನು ಏರ್ಪಡಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪೂಜೆಗೆ ಭಾಗವಹಿಸಲು ಮನವಿ ಮಾಡಿದರು. ಉಪನ್ಯಾಸ ಕಾರ್ಯಕ್ರಮವನ್ನು ಬಸವಧಾಮದ ಬಸವೇಶ್ವರ ಮಾತಾಜಿ ಮತ್ತು ಹೊಳಲ್ಕೆರೆ ಉಪನ್ಯಾಸಕ ಡಾ.ಮಂಜುನಾಥ್ ನಡೆಸಿಕೊಡುವರು ಎಂದು ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಆರ್.ಬಿ.ಜಯಣ್ಣ, ಜಿ.ಆರ್.ಶಿವಕುಮಾರ್, ಸಿದ್ದರಾಮಣ್ಣ, ತಿಪ್ಪೂರು ಮೂರ್ತಣ್ಣ, ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ಮಹಾದೇವಣ್ಣ, ಅದಲಗೆರೆ ಬಸವರಾಜು, ಬಾಳೆಕಾಯಿ ಬಸವರಾಜು, ಯತೀಶ್, ಪಾಲನೆತ್ರ,ದಿವ್ಯಪ್ರಕಾಶ್, ವಿಶ್ವನಾಥ್ , ಚನ್ನಶೇಟ್ಟಿಹಳ್ಳಿ ಯತೀಶ್, ತ್ರೀನೇತ್ರ, ಗಂಗಾಧರಯ್ಯ, ಗುರು, ಹಾಗೂ ಅಖಿಲಭಾರತ ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಬಸವ ಜಯಂತಿ ಆಚರಣೆ ಸಮಿತಿ, ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಶಿವಬಸವ ನೌಕರರ ಸೌಹಾರ್ದ ಸಹಕಾರಿ ಬ್ಯಾಂಕ್ ಪದಾಧಿಕಾರಿಗಳು ಮತ್ತಿತರರು ಇದ್ದರು.





