
ತುಮಕೂರು: ಸಮರ್ಪಕವಾಗಿ ಸಾಲ ವಸೂಲಿಯಾಗದಿದ್ದರೆ ಯಾವುದೇ ಹಣಕಾಸು ಸಂಸ್ಥೆ ಆರೋಗ್ಯಕರವಾಗಿರುವುದಿಲ್ಲ. ಆರ್ಥಿಕ ಶಿಸ್ತು, ಶ್ರದ್ಧೆಯಿಂದ ಶ್ರಮಿಸಿದರೆ ಸಂಸ್ಥೆ ಬೆಳವಣಿಗೆಯಾಗುತ್ತದೆ. ಹರ್ತಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯವರು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾ ಸಂಘದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಈ ಸಂಘ ಬ್ಯಾಂಕ್ ಆಗಿ ಪರಿವರ್ತನೆಯಾಗಲಿ ಎಂದು ಹರ್ತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಆದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಹಿಂಭಾಗ ಹರ್ತಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ನಂತರ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಚಿವರು, ಇಂದು ಸಹಕಾರ ಕ್ಷೇತ್ರ ದೊಡ್ಡ ಮಟ್ಟದಲ್ಲಿ ಬೆಳವಣಿಗೆಯಾಗಿದೆ. ನಮ್ಮ ಸಂಘವನ್ನೂ ದೊಡ್ಡದಾಗಿ ಬೆಳೆಸಿ ಹೆಚ್ಚು ಜನರಿಗೆ ಅದರ ಪ್ರಯೋಜನ ದೊರೆಯಲು ಎಲ್ಲರೂ ಕಾಳಜಿಯಿಂದ ಶ್ರಮಿಸಬೇಕು ಎಂದು ಹೇಳಿದರು.
ಸಮುದಾಯದ ಮಕ್ಕಳ ವ್ಯಾಸಂಗ ಹಾಗೂ ಸಮುದಾಯದ ಸಂಘಟನೆ ಉದ್ದೇಶದಿಂದ ತಮ್ಮ ತಂದೆ ಹೆಚ್.ಎಂ. ಗಂಗಾಧರಯ್ಯನವರು ಹರ್ತಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿದರು. ತಾವು ಸಂಘಕ್ಕೆ ೨ ಕೋಟಿ ರೂ. ಠೇವಣಿ ನೀಡಿದ್ದು, ಕೇವಲ ಠೇವಣಿ ಸಂಗ್ರಹ ಮಾತ್ರವಲ್ಲದೆ ಸಂಘಕ್ಕೆ ಹೆಚ್ಚು ಜನ ಷೇರುದಾರರನ್ನು ಸದಸ್ಯರನ್ನಾಗಿ ಮಾಡಿ ಸಂಘವನ್ನು ಬೆಳೆಸಬೇಕು. ಅಗತ್ಯವಿರುವವರು ಸಂಘದಿAದ ಆರ್ಥಿಕ ಚಟುವಟಿಕೆ ನಡೆಸಲು ಸಹಾಯವಾಗಬೇಕು. ಮುಂದೆ ಬ್ಯಾಂಕ್ ಆಗಿ ಪರಿವರ್ತಿಸಿ ಸರ್ಕಾರದಿಂದ ಸಿಗಬಹುದಾದ ಅನುಕೂಲಗಳನ್ನು ಪಡೆಯುವ ಬಗ್ಗೆ ಗಮನಹರಿಸಬೇಕು ಎಂದು ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.

ಹರ್ತಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಎಸ್. ದಿನೇಶ್ ಮಾತನಾಡಿ, 1994ಲ್ಲಿ ಆರಂಭವಾದ ಸಂಘ ಹಂತಹಂತವಾಗಿ ಬೆಳವಣಿಗೆಯಾಗುತ್ತಾ ಪ್ರಸ್ತುತ 2600 ಸದಸ್ಯರನ್ನು ಹೊಂದಿದೆ. ಸಂಘದಿಂದ ಅನೇಕರು ಅನುಕೂಲ ಪಡೆದಿದ್ದರೆ. ಈಗ ನಿಯಮಿತವಾಗಿ ಸಾಲ ವಸೂಲಾತಿಯಾಗಿ ಪ್ರಗತಿಯತ್ತ ಸಾಗಿದೆ. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರಾಗಿ ಬೆಳವಣಿಗೆಗೆ ಸಹಕರಿಸಬೇಕು ಎಂದು ಕೋರಿದರು.
ಈ ವೇಳೆ ಸಂಘದ ಹಾಗೂ ಸಮುದಾಯದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಚಿವ ಡಾ. ಜಿ. ಪರಮೇಶ್ವರ್ ಅವರ ಪತ್ನಿ ಕನ್ನಿಕಾ ಪರಮೇಶ್ವರ್, ಹಿರಿಯ ಹರಿಕಥಾ ವಿದ್ವಾನ್ ಡಾ. ಲಕ್ಷ್ಮಣ್ ದಾಸ್, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್, ಬೆಸ್ಕಾಂ ನಿವೃತ್ತ ಎಂ.ಡಿ. ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್, ವಾರ್ತಾ ಇಲಾಖೆ ಉಪನಿರ್ದೇಶಕ ಹಿಮಂತ್ರಾಜ್, ರೇಷ್ಮೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀನರಸಯ್ಯ, ಮುಖಂಡರಾದ ಭಾನುಪ್ರಕಾಶ್, ಲಿಂಗರಾಜು, ಸಂಜೀವಪ್ಪ, ಸಂಘದ ನಿರ್ದೇಶಕರುಗಳಾದ ಡಾ.ವೈ. ದಾಸಪ್ಪ, ಸಿ.ಹೆಚ್. ಲಕ್ಷ್ಮಯ್ಯ, ವಿ. ಮೋಹನ್ಕುಮಾರ್, ಬಿ.ಜಿ. ನಿಂಗರಾಜು, ಡಾ.ಎನ್. ಸತೀಶ್ಬಾಬು, ಸಿ. ಆದಿನಾರಾಯಣ, ಬಿ. ಶಿವಣ್ಣ, ಎಂ.ಎನ್. ತಿಪ್ಪೇಸ್ವಾಮಿ, ಹೆಚ್.ಎಂ. ಸುರೇಶ್, ಶೆಟ್ಟಳ್ಳಯ್ಯ, ಆರ್. ಸಿದ್ಧರಾಮಯ್ಯ, ಬಿ.ಆರ್. ರತ್ನಮ್ಮ, ಎಂ. ವಿಮಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ಶಿವರಾಜು ಮತ್ತಿತರ ಮುಖಂಡರು ಭಾಗವಹಿಸಿದ್ದರು.





