ಗುಬ್ಬಿ :ಎಂಟು ನೂರು ವರ್ಷಗಳ ಇತಿಹಾಸವಿರುವ ಕ್ಷೇತ್ರ ಧರ್ಮಸ್ಥಳದಲ್ಲಿ ಚತುರ್ ದಾನಗಳು ನಡೆಯುತ್ತವೆ ಎಂದು ತಾಲೂಕು ಯೋಜನಾಧಿಕಾರಿ ಜಯಂತಿ ತಿಳಿಸಿದರು.
ತಾಲೂಕಿನ ಸಿ ಎಸ್ ಪುರ ಹೋಬಳಿ ಚಿನ್ನನಾಯಕನಪಾಳ್ಯ ಗ್ರಾಮದ ಶ್ರೀ ದೊಡ್ಡಮ್ಮ ದೇವಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ 2.5 ಲಕ್ಷ ರೂಗಳ ಡಿಡಿ ವಿತರಣೆ ಮಾಡಿ ಮಾತನಾಡಿ, ಧರ್ಮಸ್ಥಳದಲ್ಲಿ ಪ್ರಮುಖವಾಗಿ ಅನ್ನದಾನ, ವಸ್ತ್ರದಾನ, ವಿದ್ಯಾದಾನ, ಅಭಯದಾನ ನೀಡುತ್ತಾ ಬರುತ್ತಿದೆ. ಪ್ರಮುಖವಾಗಿ ದೇವಸ್ಥಾನಗಳ ಅಭಿವೃದ್ಧಿಗೆ ಅಭಯದಾನದ ಮೂಲಕ ಪೂಜ್ಯರ ಮಾರ್ಗದರ್ಶನದಲ್ಲಿ ಹಲವಾರು ದೇವಾಲಯಗಳಿಗೆ ಡಿಡಿ ನೀಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕೈಜೋಡಿಸಲಾಗುತ್ತಿದೆ. ದೇವಸ್ಥಾನ ಸುಸಜ್ಜಿತವಾಗಿ ನಿರ್ಮಾಣವಾಗಬೇಕಾದರೆ ಗ್ರಾಮಸ್ಥರೆಲ್ಲರೂ ಸಂಘಟಿತರಾಗಿ ಕೈಜೋಡಿಸಿದಾಗ ಮಾತ್ರ ಸುಂದರ ದೇವಾಲಯ ನಿರ್ಮಾಣ ಮಾಡಬಹುದು ಎಂದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಮಾಯಮ್ಮ, ಇಡಗೂರು ಭಾಗದ ಸೇವಾ ಪ್ರತಿನಿಧಿ ನಳಿನ, ಶ್ರೀ ದೊಡ್ಡಮ್ಮದೇವಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಹನುಮಂತಯ್ಯ, ಖಜಾಂಚಿಗ ಶ್ರೀಕಾಂತ್, ಸದಸ್ಯರು,ಗ್ರಾಮಸ್ಥರು, ಸಿಬ್ಬಂದಿಗಳು ಮತ್ತಿತರರು ಇದ್ದರು.





