
ಗುಬ್ಬಿ : ಪಟ್ಟಣದ ಬಿದ್ದಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ ಇರುವ ಗೋ ಗ್ಯಾಸ್ ಬಂಕ್ ನಲ್ಲಿ ದಿಢೀರನೆ ಗ್ಯಾಸ್ ಬೆಲೆ ಹೆಚ್ಚಿಸಿದ ಘಟನೆ ನಡೆದಿದೆ.
ತಾಲೂಕಿನ ಆಟೋ ಚಾಲಕರು ಗ್ಯಾಸ್ ಹಾಕಿಸಿಕೊಳ್ಳಲು ಹೋದಾಗ ದಿಢೀರನೆ ಬೆಲೆ ಹೆಚ್ಚಾಗಿದೆ ಎಂದು ಬಂಕ್ ವ್ಯವಸ್ಥಾಪಕ ಹೇಳಿದ್ದಾರೆ. ಇದರಿಂದ ಆಟೋ ಚಾಲಕರ ಸಂಘದವರು ಅಸಮಾಧಾನ ಗೊಂಡು ಮಧ್ಯಾಹ್ನ 3 ಗಂಟೆಯಲ್ಲಿ 79 ರೂಪಾಯಿ ಇದ್ದ ಅನಿಲದ ದರ 84.99 ರೂಪಾಯಿಗೆ ಏರಿಕೆ ಮಾಡಿರುವುದು ಸರಿಯಲ್ಲ ಎಂದು ಬಂಕ್ ಹತ್ತಿರ ಆಟೋ ನಿಲ್ಲಿಸಿ ಪ್ರತಿಭಟನೆ ಮಾಡಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಲಕ್ಕೇಗೌಡ ಮಾತನಾಡಿ ಈ ತಿಂಗಳಲ್ಲಿ ಲೀಟರ್ ಗ್ಯಾಸ್ ಗೆ 30 ರೂಪಾಯಿ ದರ ಏರಿಕೆ ಮಾಡಿದ್ದಾರೆ. ಈ ರೀತಿ ಹೆಚ್ಚಳವಾದರೆ ಆಟೋ ಚಾಲಕರ ಕುಟುಂಬಗಳು ಬೀದಿಗೆ ಬರುತ್ತವೆ. ಇದನ್ನು ಮನಗಂಡ ಸರ್ಕಾರವು ಗೋ ಗ್ಯಾಸ್ ಕಂಪನಿಗಳಿಗೆ ನಿಯಮ ರೂಪಿಸಿ ನಿಖರ ಬೆಲೆಗೆ ಮಾರಾಟ ಮಾಡಲು ಆದೇಶ ನೀಡಿದರೆ ಆಟೋ ಚಾಲಕರ ಕುಟುಂಬಗಳು ಉಳಿಯುತ್ತವೆ ಎಂದರು.

ಸ್ಥಳಕ್ಕೆ ಆಹಾರ ನಿರೀಕ್ಷಕರಾದ ಸಿದ್ದೇಗೌಡ ಭೇಟಿ ನೀಡಿ ಅನಿಲದ ಬೆಲೆ ಹೆಚ್ಚಳ ಮಾಡಿರುವುದಕ್ಕೆ ಆದೇಶ ಪ್ರತಿ ಕೊಡುವುದಾಗಿ ಬಂಕ್ ವ್ಯವಸ್ಥಾಪಕರನ್ನು ಕೇಳಿದರು ಬಂಕ್ ವ್ಯವಸ್ಥಾಪಕ ನಮ್ಮ ಮೇಲಾಧಿಕಾರಿಯ ವಾಯ್ಸ್ ಸಂದೇಶ ಕಳಿಸಿದ್ದಾರೆ ಆದ್ದರಿಂದ ನಾವು ಬೆಲೆಯನ್ನು ಹೆಚ್ಚಿಗೆ ಮಾಡಿದ್ದೇವೆ ಎಂದು ಹೇಳಿದರು. ಬಂಕ್ ಮೇಲಾಧಿಕಾರಿಗಳೊಂದಿಗೆ ಫೋನ್ ಮೂಲಕ ಮಾತನಾಡಿದಾಗ ನಾವು ಜಂಟಿ ನಿರ್ದೇಶಕರ ಹತ್ತಿರ ಮಾತನಾಡಿದ್ದೇವೆ ಎಂದು ತಿಳಿಸು ಎಂದು ಹೇಳಿದರು. ಗುಬ್ಬಿ ಆಹಾರ ನಿರೀಕ್ಷಕರು ಜಂಟಿ ನಿರ್ದೇಶಕರ ಹತ್ತಿರ ಫೋನ್ ಮೂಲಕ ಮಾತನಾಡಿ ನಂತರ ಆಟೋ ಚಾಲಕರಿಗೆ ಸಮಾಧಾನ ಹೇಳಿ ನಾಳೆ ಒಂದು ರೂಪಾಯಿ ಕಡಿಮೆ ಮಾಡುತ್ತಾರಂತೆ ಎಂದು ತಿಳಿಸಿ ಪ್ರತಿಭಟನೆ ಕೈ ಬಿಡುವುದಾಗಿ ಹೇಳಿದರು.






