
ಗುಬ್ಬಿ : ಮಹಿಳೆಯರು ಸಮೃದ್ಧ ರಾಷ್ಟ್ರ ಹಾಗೂ ಸಮಾಜ ಕಟ್ಟಲು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ಸಾಹಿತಿ ಶೈಲಾ ನಾಗರಾಜ್ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್, ಕರ್ನಾಟಕ ಸಾವಿತ್ರಿಬಾಯಿ ಧಾರವಾಡ ಜಿಲ್ಲಾಘಟಕ, ತುಮಕೂರು ಹಾಗೂ ಗುಬ್ಬಿ ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ಪುರುಷ ಕಲಿತರೆ ಅವನು ಮಾತ್ರ ಸುಶಿಕ್ಷಿತನಾಗುತ್ತಾನೆ, ಆದರೆ ಒಬ್ಬ ಮಹಿಳೆ ಕಲಿತರೆ ಇಡೀ ಕುಟುಂಬವೇ ಸುಶಿಕ್ಷಿತವಾಗುತ್ತದೆ ಎಂಬ ಮಾತು ಅವಳ ಶೈಕ್ಷಣಿಕ ಮಹತ್ವವನ್ನು ಸಾರುತ್ತದೆ. ಮಹಿಳೆಯರು ಸಣ್ಣ ಉದ್ಯಮದಿಂದ ಹಿಡಿದು ದೊಡ್ಡ ಕಂಪನಿಗಳವರೆಗೆ ಸಮರ್ಥವಾಗಿ ಮುನ್ನಡೆಸುತ್ತಿರುವುದನ್ನು ನಾವು ಕಾಣಬಹುದಾಗಿದೆ. ಯಾವ ದೇಶದಲ್ಲಿ ಮಹಿಳೆಯರನ್ನು ಗೌರವಿಸಲಾಗುತ್ತದೆಯೋ ಅಲ್ಲಿಯ ದೇಶ ಸುಭಿಕ್ಷ ವಾಗಿರುತ್ತದೆ ಎಂದು ತಿಳಿಸಿದರು..

ಕ್ಷೇತ್ರ ಶಿಕ್ಷಣಾಧಿಕಾರಿ ಎಂಎಸ್ ನಟರಾಜು ಮಾತನಾಡಿ, ಮನೆಯ ನಿರ್ವಹಣೆಯ ಜೊತೆಗೆ ವೃತ್ತಿಜೀವನವನ್ನು ಸರಿದೂಗಿಸುವ ಅವರ ರೀತಿ ನಾಯಕತ್ವದ ಗುಣಕ್ಕೆ ಸಾಕ್ಷಿ. ರಾಜಕೀಯ ಮತ್ತು ಆಡಳಿತಾತ್ಮಕ ರಂಗಗಳಲ್ಲಿ ಮಹಿಳೆಯರ ಉಪಸ್ಥಿತಿಯು ಹೆಚ್ಚು ಮಾನವೀಯ ಮತ್ತು ಅಂತರ್ಗತ ನಿರ್ಧಾರಗಳಿಗೆ ದಾರಿಯಾಗುತ್ತದೆ. ಬಾಲ್ಯದಿಂದಲೇ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು.ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯ. ಭಯವಿಲ್ಲದ ವಾತಾವರಣದಲ್ಲಿ ಅವರು ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ನೀಡಬೇಕು ಎಂದರು.
ಪೋಲಿಸ್ ಅಧಿಕಾರಿ ಕವಿತಾ ಮಾತನಾಡಿ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಯಾವುದೇ ತೊಂದರೆ ಕಂಡು ಬಂದರೆ ತಕ್ಷಣ ಪೊಲೀಸ್ ಸಹಾಯವಾಣಿಗೆ ಕರೆ ಮಾಡುವ ಮೂಲಕ ರಕ್ಷಣೆಯನ್ನು ಪಡೆದುಕೊಳ್ಳಬೇಕು. ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪುಂಡು ಪೋಕರ್ ಗಳಿಂದ ಸಮಸ್ಯೆಗಳು ಕಂಡು ಬಂದಾಗ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಪುಲೆ ಸಂಘದ ಅಧ್ಯಕ್ಷೆ ಎಸ್.ವಿಲಕ್ಷ್ಮೀ, ಕಾರ್ಯದರ್ಶಿ ಮಂಜಮ್ಮ, ಜಿಲ್ಲಾ ಘಟಕದ ಅಧ್ಯಕ್ಷೆ ಅನುಸೂಯದೇವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ದಯಾನಂದ್, ಪದ್ಮಾವತಿ, ಪೂರ್ಣಿಮಾ, ರೇಣುಕಮ್ಮ, ಸರ್ಕಾರಿ ನೌಕರರ ಸಂಘದ ರಾಮಚಂದ್ರ , ಮಲ್ಲೇಶ್, ಶಿವಮ್ಮ, ಸಾವಿತ್ರಿಬಾಯಿ ಪುಲೆ ಸಂಘದ ಪದಾಧಿಕಾರಿಗಳಾದ ಕಮಲಮ್ಮ, ತಿಮ್ಮಮ್ಮ, ಶಿವರತ್ನ, ಕೋಮಲ, ಶಕುಂತಲಾ, ಸರೋಜಮ್ಮ, ರೇಣುಕಮ್ಮ, ಸಿಂಧು, ಸಿ ಆರ್ ಪಿ ಗಂಗಾಧರ್, ರಂಗಧಾಮಯ್ಯ, ರಾಮಕೃಷ್ಣಪ್ಪ, ಸಿಡ್ಲಪ್ಪ,ವ ಹಾಗೂ ಎಲ್ಲಾ ಸಂಘಟನೆಯ ಪದಾಧಿಕಾರಿಗಳು, ಸದಸ್ಯರುಗಳು, ಶಿಕ್ಷಕಿಯರು ಇತರರು ಭಾಗವಹಿಸಿದ್ದರು.





