
ಗುಬ್ಬಿ : ನಿವೃತ ಶಿಕ್ಷಕ ಬಿ.ಸಿ.ಶಿವಣ್ಣ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಸೇವೆ ಅಪಾರವಾದದ್ದು. ತಮ್ಮ ಹೆಚ್ಚಿನ ಸಮಯವನ್ನು ವಿದ್ಯಾರ್ಥಿಗಳ ಯಶಸ್ಸಿಗಾಗಿ ಮುಡಿಪಾಗಿಟ್ಟಿದ್ದಾರೆ. ಶಿಕ್ಷಕರಾಗಿ 33 ವರ್ಷಗಳ ಸೇವೆ ಅವಿಸ್ಮರಣೀಯವಾದದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ತಿಳಿಸಿದರು.
ತಾಲ್ಲೂಕಿನ ಕಡಬ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲೆ ವಿಭಾಗದಲ್ಲಿ ಹಮ್ಮಿಕೊಂಡಿದ್ದ ನಿವೃತ ಶಿಕ್ಷಕ ಬಿ.ಸಿ ಶಿವಣ್ಣ ನವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು ಇಂದು ಕಡಬ ಪ್ರೌಢಶಾಲೆಯಲ್ಲಿ ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದೆ. ಶಾಲೆಗೆ ಗೋಕುಲ್ ದಾಸ್, ಒಸಾಟ್ ಸಂಸ್ಥೆಯಿಂದ ಹೆಚ್ಚಿನ ಶಾಲಾ ಕೊಠಡಿಗಳು ನಿರ್ಮಾಣವಾಗಿವೆ. ಇದಕ್ಕೆ ಬಿ ಸಿ ಶಿವಣ್ಣ, ಎಸ್ ಡಿ ಎಂ ಸಿ ಅಧ್ಯಕ್ಷ ಶಿವಕುಮಾರ್ ಪಾತ್ರ ಪ್ರಮುಖವಾಗಿದೆ. ನಿವೃತ್ತಿ ನಂತರ ಅವರ ಜೀವನ ಸುಖಮಯವಾಗಿರಲಿ ಎಂದು ಆಶಿಸಿದರು.

ಸನ್ಮಾನಿತ ನಿವೃತ ಶಿಕ್ಷಕ ಬಿ.ಸಿ ಶಿವಣ್ಣ ಮಾತನಾಡಿ, ಯಾವುದೇ ಒಬ್ಬ ಶಿಕ್ಷಕ ಸಂಸ್ಕಾರವಂತನಾದರೆ, ಚಾರಿತ್ರ್ಯವಂತನಾದರೆ ಶಿಕ್ಷಣದ ಜೊತೆಗೆ ಬದುಕಿನ ಶಿಕ್ಷಣವನ್ನು ಹೇಳಿ ಕೊಟ್ಟಾಗ ಶಿಕ್ಷಕನ ಜೀವನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಭೋದಿಸಿದ್ದೇನೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ವ್ಯಾಸಂಗ ಮಾಡಿ ಬದುಕ ಕಟ್ಟಿಕೊಳ್ಳಬೇಕು. ತಂದೆ,ತಾಯಿ, ಶಿಕ್ಷಕರ ಋಣ ತೀರಿಸುವ ಕೆಲಸ ಮಾಡಬೇಕು ಎಂದರು.
ಪ್ರಾಂಶುಪಾಲ ಸದಾಶಿವಯ್ಯ ಮಾತನಾಡಿ ಶಿಕ್ಷಕರಿಗೆ ಮಾತೃ ಹೃದಯ ಇದ್ದಾಗ ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ನಡೆಯಲು ಸುಸಂಸ್ಕೃತರಾಗಲು ಸಾಧ್ಯವಾಗುತ್ತದೆ. ಒಬ್ಬ ಶಿಕ್ಷಕ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಬಿ.ಸಿ ಶಿವಣ್ಣ ಅವರು ತನ್ನ 33 ವರ್ಷದ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಅವರ ನಿವೃತ್ತಿ ಜೀವನ ನಂತರ ಬದುಕು ಸುಖಮಯವಾಗಿರಲಿ ಎಂದ ಅವರು ನಿವೃತ್ತಿಯ ನಂತರವೂ ನಿಮ್ಮ ಮಾರ್ಗದರ್ಶನ ನಮ್ಮ ಶಾಲೆಗೆ ಸದಾ ಇರಲಿ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ 33 ವರ್ಷಗಳ ಕಾಲ ಸುದೀರ್ಘ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಿ ಸಿ ಶಿವಣ್ಣ ಅವರನ್ನು ಅವರ ಸ್ವಗ್ರಾಮ ಬೆಲವತ್ತ ದಿಂದ ಕಡಬ ಶಾಲೆಯ ಶಾಲೆಗೆ ಬೆಳ್ಳಿ ರಥದಲ್ಲಿ ವಿದ್ಯಾರ್ಥಿಗಳು ಪೂರ್ಣಕುಂಭ,ವಿವಿಧ ಜಾನಪದ ಕಲಾತಂಡಗಳೋಂದಿಗೆ ಮೆರವಣಿಗೆ ಕರೆತಂದರು.
ಗ್ರಾಪಂ ಉಪಾಧ್ಯಕ್ಷೆ ಪೂರ್ಣಿಮಾ ಶಿವಕುಮಾರ್, ಉಪ ಪ್ರಾಂಶುಪಾಲ ಶ್ರೀನಿವಾಸ್ ರೆಡ್ಡಿ, ಎಸ್ ಡಿ ಎಮ್ ಸಿ ಅಧ್ಯಕ್ಷ ಶಿವಕುಮಾರ್, ಪಟೇಲ್ ಕೆ ದೇವರಾಜ್, ಜಯಲಕ್ಷ್ಮಿ ಶಿವಣ್ಣ, ಇಂದಿರಮ್ಮ, ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ರಾಜ್ ಕುಮಾರ್ ಸೇರಿದಂತೆ ಶಿಕ್ಷಕರು, ಪೋಷಕರು, ಸಾವಿರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





