
ಗುಬ್ಬಿ ನಗರದ ಪಿಎಂ ಶ್ರೀ ಬಾಲಕರ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇಂದು ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರಾದ ಡಾ. ಹುಲಿಕಲ್ ನಟರಾಜ್ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಆನಂದ್ ಬಿಲ್ಲೆಮನೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಹುಲಿಕಲ್ ನಟರಾಜ್, ಮನಸ್ಥಿತಿ ಮನಿಸ್ಥಿತಿಯಿಂದ ದೂರವಾದಾಗ ಮಾತ್ರ ಪರಿಸ್ಥಿತಿ ಉತ್ತಮವಾಗುತ್ತದೆ ಇಂದು ಮಾನವ ಸಂಶೋಧನೆಯಿಂದ ತಂತ್ರಜ್ಞಾನ ನಿರಂತರವಾಗಿ ಅಪ್‌ಗ್ರೇಡ್ ಆಗುತ್ತಿದ್ದರೂ, ಮಾನವನ ಮನಸ್ಸು ಮಾತ್ರ ಔಟ್‌ಡೇಟೆಡ್ ಆಗುತ್ತಿದೆ. ಕಾರಣ, ಮನಸ್ಥಿತಿ ಮನಿಸ್ಥಿತಿಯ ಕಡೆಗೆ ವಾಲಿ ದುರಾಸೆಗೆ ಒಳಗಾಗಿ ಮೌಲ್ಯಗಳಿಂದ ದೂರವಾಗುತ್ತಿದ್ದಾನೆ ಕಪಟ ದಾರಿಯಲ್ಲಿ ಹಣ ಗಳಿಸುವ ದಾರಿ ಹಿಡಿಯುತ್ತಿದ್ದಾನೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳು ಐದು “ಸಿ” ಫೋಬಿಯಾಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದ ಅವರು,1.ಸೆಲ್‌ಫೋನ್ 2.ಚಾಟಿಂಗ್ 3.ಕೇಬಲ್ 4.ಸಿನಿಮಾ 5.ಕ್ರಿಕೆಟ್ ಈ ಐದು ಅತಿಯಾದ ಆಸಕ್ತಿಗಳಿಂದ ದೂರವಿದ್ದರೆ ಮಕ್ಕಳಲ್ಲಿ ಆರೋಗ್ಯಕರ ಚಿಂತನೆ ಬೆಳೆಸಬಹುದು ಎಂದರು.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದಿಂದ ಈ ರೀತಿಯ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ನಡೆಸುವಂತೆ ನಿರ್ದೇಶನ ನೀಡಲಾಗಿದೆ. ಭಾರತದ ಸಂವಿಧಾನದ 51 ಪರಿಚ್ಛೇದದಲ್ಲಿ ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ರೂಪಿಸಬೇಕು ಎಂದು ಉಲ್ಲೇಖವಿದೆ ಎಂದು ತಿಳಿಸಿದರು.
ಮಕ್ಕಳಲ್ಲಿ ಪ್ರಶ್ನೆ ಮಾಡುವ, ತರ್ಕಿಸುವ ಹಾಗೂ ವಿಮರ್ಶಾತ್ಮಕ ಚಿಂತನೆ ಬೆಳೆದಾಗ ಮಾತ್ರ ದೇಹಸ್ಥಿತಿ, ಮನಸ್ಥಿತಿ ಹಾಗೂ ಪರಿಸ್ಥಿತಿ ಸಮತೋಲನದಲ್ಲಿರುತ್ತದೆ. ಆಗ ಮಕ್ಕಳು ವಿಕೃತಿಯಿಂದ ದೂರವಾಗಿ ಸಹಜ ಪ್ರಕೃತಿಯತ್ತ ಮನಸ್ಸು ಮಾಡಿ ಬದುಕಿನ ಸರಿಯಾದ ಪಥವನ್ನು ಹಿಡಿಯುತ್ತಾರೆ. ಪರೀಕ್ಷಾ ಶಿಕ್ಷಣದ ಜೊತೆಗೆ ಬದುಕಿನ ಶಿಕ್ಷಣವೂ ಅಗತ್ಯವಿದ್ದು, ಪ್ರತಿಯೊಂದು ಶಾಲೆಯಲ್ಲೂ ಮಕ್ಕಳ ವಿಜ್ಞಾನ ಸಂಘಗಳನ್ನು ಸ್ಥಾಪಿಸಬೇಕು. ಮನು–ಮನಿ ಸಂಸ್ಕೃತಿಯಿಂದ ದೂರಾಗಿ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾವಿ ಮುಖ್ಯ ಶಿಕ್ಷಕಿ ಮಂಜುಳ, ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಸುಬ್ರಮಣ್ಯ, ಹಿರಿಯ ಶಿಕ್ಷಕರಾದ ನಟರಾಜು, ಈರಮ್ಮ, ಸುಮಿತ್ರಾ, ನಿತ್ಯಶ್ರೀ, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಣಿ ದೇವಿಕಾ ದೇವಿ, ಸರ್ಕಾರಿ ಬಾಲಕಿಯರ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯರಾದ ಅಪರ್ಣ, ಬಂಗಲೋಪಾಳ್ಯ ಶಾಲೆಯ ಮುಖ್ಯೋಪಾಧ್ಯಾಯರಾದ ಪಿ. ಮಂಗಳಗೌರಿ, ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.





