
ಗುಬ್ಬಿ: ಸಂಪನ್ಮೂಲಗಳ ಕೊರತೆ ಮತ್ತು ತಾಂತ್ರಿಕ ಸವಾಲುಗಳಿದ್ದ ಕಾಲದಲ್ಲೇ ಬ್ಯಾಬೇಜ್ ಭವಿಷ್ಯದ ಬಗ್ಗೆ ಯೋಚಿಸಿದ ಮಹಾನ್ ವ್ಯಕ್ತಿ ಎಂದು ಕಾರ್ಯನಿರ್ವಾಹಕ ಅಧಿಕಾರಿ ಜೆ.ಬಿ. ರಂಗನಾಥ್ ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಹಾಗೂ ಕಂಪ್ಯೂಟರ್ ಆಪರೇಟರ್ ಗಳ ಸಂಘಟನೆಯಿಂದ ಏರ್ಪಡಿಸಿದ್ದ ಕಂಪ್ಯೂಟರ್ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ದಿನಾಚರಣೆಯಲ್ಲಿ ಮಾತನಾಡಿದ ಅವರು,ಇಂದಿನ ಯುವ ವಿಜ್ಞಾನಿಗಳಿಗೆ ಮತ್ತು ಎಂಜಿನಿಯರ್ಗಳಿಗೆ ಸೀಮಿತ ಸಂಪನ್ಮೂಲಗಳಲ್ಲಿ ದೊಡ್ಡ ಬದಲಾವಣೆ ತರಲು ಪ್ರೇರಣೆ ನೀಡಿದವರು. ಚಾರ್ಲ್ಸ್ ಬ್ಯಾಬೇಜ್ ಅವರನ್ನು “ಕಂಪ್ಯೂಟರ್ನ ಪಿತಾಮಹ” ಎಂದು ಕರೆಯಲಾಗುತ್ತದೆ. ಆಧುನಿಕ ಕಂಪ್ಯೂಟರ್ಗಳ ಮೂಲ ತತ್ವಗಳನ್ನು ಇವರು 19ನೇ ಶತಮಾನದಲ್ಲೇ ರೂಪಿಸಿದ್ದರು.
ಕಂಪ್ಯೂಟರ್ಗಳು ಕೇವಲ ದೊಡ್ಡ ಕಚೇರಿಗಳಿಗೆ ಸೀಮಿತವಾಗದೆ ಸಾಮಾನ್ಯ ಜನರ ಮನೆಗಳನ್ನು ತಲುಪುವುದಕ್ಕೆ ಚಾರ್ಲ್ಸ್ ಬ್ಯಾಬೇಜ್ ಕಾರಣಕರ್ತರು. ಇಂದು ಯಾವುದೇ ಮಾಹಿತಿ ಬೇಕಿದ್ದರೂ ಕ್ಷಣಾರ್ಧದಲ್ಲಿ ಬೆರಳ ತುದಿಯಲ್ಲಿ ಲಭ್ಯವಿದೆ ಎಂದು ತಿಳಿಸಿದರು.

ತಾಲೂಕು ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಹಾಗೂ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಮತ್ತು ಬಿಲ್ ಕಲೆಕ್ಟರ್ ರವರನ್ನು ಅಭಿನಂದಿಸಲಾಯಿತು.
ತಾಲೂಕು ಯೋಜನಾಧಿಕಾರಿ ಎಂ.ಜೆ. ಜಗನ್ನಾಥ್ ಗೌಡ, ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗದವರು, ನರೇಗಾ ಸಿಬ್ಬಂದಿ ವರ್ಗದವರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ಲೆಕ್ಕ ಸಹಾಯಕರು ಗ್ರಾಮ ಪಂಚಾಯಿತಿಗಳ ಕಂಪ್ಯೂಟರ್ ಆಪರೇಟರ್, ಬಿಲ್ ಕಲೆಕ್ಟರ್ ಮತ್ತಿತರರು ಇದ್ದರು.





