
ಗುಬ್ಬಿ : ವಯಸ್ಸಾದಂತೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ಎಲ್. ಭೈರಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ನಿವೃತ್ತ ನೌಕರರ ಸಂಘದ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಗುಬ್ಬಿ ಶಾಖೆಯ ಮೇಲಂತಸ್ತು ಕಟ್ಟಡ ಉದ್ಘಾಟನಾ, ವಾರ್ಷಿಕ ಸರ್ವ ಸದಸ್ಯರ ಮಹಾಸಭೆ, ಸರ್ಕಾರಿ ನಿವೃತ್ತ ನೌಕರರ ದಿನಾಚರಣೆ, 80 ಸಮತ್ಸರ ತುಂಬಿದ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಹಿರಿಯರನ್ನು ಗೌರವದಿಂದ ಕಾಣಬೇಕು. ಹಿರಿಯರ ಸಲಹೆ ಸಹಕಾರಗಳ ಮೇರೆಗೆ ಯುವ ಜನತೆ ಮುನ್ನಡೆಯಬೇಕು.
ಎಲ್ಲಾ ತಾಲೂಕುಗಳಲ್ಲೂ ಸುಸರ್ಜಿತವಾದ ನಿವೃತ್ತ ನೌಕರರ ಭವನವನ್ನು ಕಟ್ಟಿದರೆ, ತಾವುಗಳು ಸಂಘಟಿತರಾಗಿ ಸಭೆ ಸಮಾರಂಭ ಮಾಡಲು ಸಾಧ್ಯವಾಗುತ್ತದೆ. ನಿವೃತ್ತ ನೌಕರರ ಬೇಡಿಕೆಗಳ ಬಗ್ಗೆ ನಾವು ಮುಂದಿನ ದಿನದಲ್ಲಿ ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದರು.

ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, 60 ವರ್ಷ ತುಂಬಿದ ಮೇಲೆ ಅರಳೋ ಮರುಳೋ ಎಂಬಂತೆ ಇರುವುದರಿಂದ ಮಕ್ಕಳುಗಳು ಅವರಗಳ ಆರೋಗ್ಯ, ಆಹಾರ, ವಿಹಾರ, ವಿಚಾರದ ಬಗ್ಗೆ ಗಮನ ಹರಿಸಬೇಕು. ಜೀವನದಲ್ಲಿ ಹಿರಿಯರ ಪಾತ್ರ ಮಹತ್ವವಾದದ್ದು ಅವರ ಜ್ಞಾನ ಮತ್ತು ಅನುಭವಗಳನ್ನು ಕಿರಿಯರು ಮೈಗೂಡಿಸಿಕೊಳ್ಳಬೇಕು ಎಂದರು.

ತೊರೆಮಠದ ಪೀಠಾಧ್ಯಕ್ಷರಾದ ಶ್ರೀ ಆಟವಿ ಚನ್ನಬಸವ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ, ಕೆಲಸಕ್ಕೆ ಹೊರದೇಶಕ್ಕೆ ಕಳಿಸುವ ಕನಸು ಕಾಣುತ್ತಾರೆ. ಇಂತಹ ಹಿರಿಯರಿಗೆ ಆರ್ಥಿಕ ಭದ್ರತೆ ಹಾಗೂ ಸಾಮಾಜಿಕ ರಕ್ಷಣೆ ಒದಗಿಸುವತ್ತ ಗಮನ ನೀಡಬೇಕಿದೆ.ಪ್ರತಿ ಕುಟುಂಬಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ. ಎಲ್ಲಕಾಲಗಳಿಗೂ ಅವರ ಮಾರ್ಗದರ್ಶನ ಪ್ರಸ್ತುತವಾಗಿದೆ. ಮನೆಯ ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಆರ್.ಬಿ.ಜಯಣ್ಣ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಜಿ.ಆರ್.ಶುವಕುಮಾರ್, ರಾಜ್ಯ ನಿವೃತ್ತ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಕೆ.ರಾಜಯ್ಯ, ಪ್ರಧಾನ ಕಾರ್ಯದರ್ಶಿ ಪುಟ್ಟನರಸಯ್ಯ, ತುರುವೇಕೆರೆ ಅಧ್ಯಕ್ಷ ಶಿವಯ್ಯ, ಎಸ್ ಬಿ ಐ ಬ್ಯಾಂಕ್ ವ್ಯವಸ್ಥಾಪಕ ಎನ್. ಓ. ವರದರಾಜು, ಗುಬ್ಬಿ ಘಟಕದ ಗೌರವಾಧ್ಯಕ್ಷ ಎನ್. ಮಹಾದೇವಯ್ಯ, ಉಪಾಧ್ಯಕ್ಷರಾದ ಆರ್. ದೊಡ್ಡೇಗೌಡ, ವಿ. ವೀರಭದ್ರಯ್ಯ, ಪ್ರಧಾನ ಕಾರ್ಯದರ್ಶಿ ಎನ್.ಆರ್.ರೇಣುಕಾ ಪ್ರಸಾದ್, ಖಜಾಂಚಿ ಅಪ್ಪಾಜಿ, ಸಹ ಕಾರ್ಯದರ್ಶಿಗಳಾದ ಬಿ. ರಾಮಯ್ಯ, ಬಿ.ಎನ್.ಸಂಗಪ್ಪ, ಸಂಘಟನಾ ಕಾರ್ಯದರ್ಶಿ ಬಿ. ಬಸವರಾಜು, ಕೆ.ಬಿ.ಮಹಾಲಿಂಗಯ್ಯ, ಎಸ್.ಎನ್.ಧರ್ಮಪ್ಪ, ಬಿ.ಕರಿಗಿರಿಯ್ಯ , ಕೆ.ಎನ್.ಚನ್ನಬಸವಯ್ಯ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಮತ್ತಿತರರು ಇದ್ದರು





