ಗುಬ್ಬಿ : ತಾಲ್ಲೂಕಿನ ಸಾರ್ವಜನಿಕರಿಗೆ ಧೈರ್ಯ ತುಂಬುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಕಚೇರಿ ಮುಂಭಾಗ ಅನಾವರಣಗೊಂಡಿದ್ದು ರೈತಸಂಘಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ರೈತಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಲೋಕಾರ್ಪಣೆಗೊಂಡ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ರೈತರ ಪರವಾಗಿ ಪುಷ್ಪಮಾಲೆ ಸಮರ್ಪಿಸಿ ಮಾತನಾಡಿದ ಅವರು ಬಡವರು ದೀನ ದಲಿತರ ಪರ ನಿಲ್ಲುವ ಕೆಚ್ಚು ತುಂಬುವ ಮಹಾನಾಯಕರ ಪ್ರತಿಮೆ ತಾಲ್ಲೂಕು ಕಚೇರಿ ಕಡೆಗೆ ಬೊಟ್ಟು ತೋರುತ್ತಿರುವುದು ಹೆಮ್ಮೆ ತಂದಿದೆ ಎಂದರು.
ಸರಿ ದಾರಿ ತೋರುವ ಹಾಗೂ ಸಮ ಸಮಾಜ ನಿರ್ಮಾಣಕ್ಕೆ ಅಗತ್ಯ ಕಾನೂನು ಸಂವಿಧಾನ ನೀಡಿದ ಅವರ ಆಶಯದಂತೆ ಇಂದಿನ ಸರ್ಕಾರಗಳು ನಡೆದುಕೊಳ್ಳುತ್ತಿಲ್ಲ. ಬಡವರಿಗೆ ನೀಡಬೇಕಾದ ಭೂಮಿಯನ್ನು ಮಂಜೂರು ಮಾಡದೆ ಅರ್ಜಿ 50, 53, 57 ನಮೂನೆ ಪೆಡ್ಡಿಂಗ್ ಇಟ್ಟಿರುವುದು ತೀವ್ರ ಅಸಮಾಧಾನ ತಂದಿದೆ. ಈ ಬಗ್ಗೆ ಹೋರಾಟ ನಡೆಸಲು ರೈತಸಂಘ ಸಜ್ಜಾಗಿದೆ ಎಂದ ಅವರು ಅಂಬೇಡ್ಕರ್ ಅವರ ಕಾಲದಲ್ಲಿದ್ದ ಶೇ.10 ರಷ್ಟು ಭ್ರಷ್ಟಾಚಾರ ಎಂದು ಶೇ.80 ಕ್ಕೆ ಏರಿಕೆಯಾಗಿರುವುದು ವಿಷಾದನೀಯ. ಇನ್ನಾದರೂ ಅಂಬೇಡ್ಕರ್ ಪುತ್ಥಳಿ ನೋಡಿಯಾದರೂ ಅವರ ಆಶಯದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ನಡೆದುಕೊಳ್ಳಲಿ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಲೋಕೇಶ್ ಅವರ ತಂಡ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಮಾಲೆ ಹಾಕಿದರು. ರೈತಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ರವೀಶ್, ಸುರೇಶ್, ಬಸವರಾಜು, ಈಶಣ್ಣ, ಯತೀಶ್, ಬಾಂಬೆ ಬಸವರಾಜು, ಮೋಹನ್, ಗಂಗರೇವಣ್ಣ, ನರಸಿಂಹಮೂರ್ತಿ, ರಮೇಶ್ ಸೇರಿದಂತೆ ರೈತಸಂಘದ ಕಾರ್ಯಕರ್ತರು ಹಾಜರಿದ್ದರು





