ಗುಬ್ಬಿ: ನಾನು ಯಾವ ಬಣವೂ ಅಲ್ಲ. ಕಾಂಗ್ರೆಸ್ ಬಣ ಅಷ್ಟೇ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಸ್ಪಷ್ಟನೆ ನೀಡಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮ ಮೂಲಕ ಗಂಗಾ ಕಲ್ಯಾಣ ಯೋಜನೆ ಪಂಪು ಮೋಟಾರ್ ವಿತರಣೆ ಮಾಡಿ ಮಾತನಾಡಿದ ಅವರು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಇಬ್ಬರೂ ನಮಗೆ ನಾಯಕರೇ. ಸಚಿವ ಸಂಪುಟ ಪುನರ್ ರಚನೆ ಆಗುವುದಾದಲ್ಲಿ ನನಗೆ ಸಚಿವ ಸ್ಥಾನಕ್ಕೆ ನೀಡಲು ಶಾಸಕ ರಂಗನಾಥ್ ಮನವಿ ಮಾಡಿದ್ದಾರೆ ಎಂಬುದಷ್ಟೇ ನನಗೂ ಗೊತ್ತಿರುವುದು. ಮತ್ಯಾವ ವಿಚಾರ ದೆಹಲಿ ಪ್ರವಾಸದಲ್ಲಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸಿದರು.
ಶಾಸಕರ ಸಹಿ ಸಂಗ್ರಹ ಬಗ್ಗೆ ನನಗೇನೂ ತಿಳಿದಿಲ್ಲ. ನನ್ನ ಸಹಿ ಯಾರು ಕೇಳಿಲ್ಲ. ಡಿ.ಕೆ.ಶಿವಕುಮಾರ್ ಅವರನ್ನು ನೋಡಿ ಎರಡು ತಿಂಗಳಾಗಿದೆ. ಏನೇನೂ ವದಂತಿಗಳು ಮಾಧ್ಯಮದಲ್ಲಿ ನಾನು ನೋಡುತ್ತಿದ್ದೇನೆ. ಯಾವುದಕ್ಕೂ ಸಾಕ್ಷ್ಯಾಧಾರವಿಲ್ಲ ಎಂದ ಅವರು ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಹಿನ್ನಲೆ ಯಾವ ಯೋಜನೆ ಜಾರಿಯಾಗಿರಲಿಲ್ಲ. ಈಗ ಗಂಗಾ ಕಲ್ಯಾಣ ಯೋಜನೆ ಮೂಲಕ ಪಂಪು ಮೋಟಾರ್ ವಿತರಣೆ ಮಾಡಲಾಗುತ್ತಿದೆ. ಒಟ್ಟು 73 ಫಲಾನುಭವಿಗಳ ಪೈಕಿ 43 ಜನಕ್ಕೆ ವಿತರಣೆ ಮಾಡಲಾಗಿದೆ. ಉಳಿದ 30 ವಾರದೊಳಗೆ ವಿತರಣೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಗುರು ರೇಣುಕರಾಧ್ಯ, ರಮೇಶ್, ರಂಗನಾಥ್, ಶಿವಾಜಿರಾವ್, ಮಹರ್ಷಿ ವಾಲ್ಮೀಕಿ ನಿಗಮದ ವ್ಯವಸ್ಥಾಪಕಿ ಬಾಗಿರತಿ, ಮೋಹನ್ ಇತರರು ಇದ್ದರು





