ತುಮಕೂರು: ಸಿಲಿಂಡರ್ ಅನಿಲ ಸೋರಿಕೆಯಿಂದ ಭೀಕರ ಅಗ್ನಿ ಅವಘಡ ಸಂಭವಿಸಿ ರೈತನ ಮನೆ ಸುಟ್ಟು ಭಸ್ಮವಾಗಿದ್ದು ಕುರಿಮಾರಿ ತಂದಿಟ್ಟಿದ್ದ ಹಣ ಬೆಂಕಿಗಾಹುತಿಯಾಗಿದೆ.
ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಬಂದಕುಂಟೆ ಗ್ರಾಮದ ಗೊಲ್ಲರ ಹಟ್ಟಿಹಲ್ಲಿ ತಡರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಗ್ರಾಮಕ್ಕೆ ಸೇರಿದ ರೈತ ಮೂಡ್ಲಪ್ಪ ಅವರ ಮನೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗುವ ಮೂಲಕ ಬೆಂಕಿಗಾಹುತಿಯಾಗಿದೆ.
ಕಾರ್ತಿಕ ಮಾಸದ ದೀಪೋತ್ಸವಕ್ಕೆ ಮನೆಮಂದಿ ತೆರಳಿದ್ದ ವೇಳೆ ಮನೆಯಲ್ಲಿ ಸಿಲಿಂಡರ್ ಅನಿಲ ಸೋರಿಕೆಯಾಗಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಜ್ವಾಲೆ ಭುಗಿಲೆದ್ದು ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಈ ದುರಂತದಲ್ಲಿ ಮನೆಯಲ್ಲಿದ್ದ ₹1.50 ಲಕ್ಷ ನಗದು (ಕುರಿ ಮಾರಿದ ಹಣ) ಭೂಮಿ ದಾಖಲೆಗಳು,ಲಕ್ಷಾಂತರ ಮೌಲ್ಯದ ಚಿನ್ನಾಭರಣ,ಧವಸ-ಧಾನ್ಯ, ಹೊಸ ಮೋಟಾರ್ ಪಂಪ್‌ಸೆಟ್ ಎಲ್ಲವೂ ಬೆಂಕಿಗಾಹುತಿಯಾಗಿದೆ.
ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಉರಿಯುತ್ತಿದ್ದ ಸಿಲಿಂಡರ್ ನಂದಿಸುವಲ್ಲಿ ಯಶಸ್ವಿಯಾಯಿತು. ಆದರೆ ಅವರ ಆಗಮಿಸುವಷ್ಟರಲ್ಲಿ ಮನೆ ಬಹುತೇಕ ಭಾಗ ಸುಟ್ಟು ಭಸ್ಮವಾಗಿತ್ತು.
ಕುರಿ ಮಾರಿದ ಹಣ, ವಡವೆ, ಹಾಗೂ ಭೂಮಿ ದಾಖಲೆಗಳವರೆಗೂ ಕಳೆದುಕೊಂಡ ರೈತ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ.
ಈ ಘಟನೆ ಕಳ್ಳಂಬೆಳ್ಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





