ಗುಬ್ಬಿ: ತಾಲೂಕಿನ ಸಿಎಸ್ ಪುರ ಹೋಬಳಿ ಅಂಕಳಕೊಪ್ಪ ಮಜರೆ ವೀರಣ್ಣನಗುಡಿ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ಪುಣ್ಯಕ್ಷೇತ್ರದಲ್ಲಿ ನ. 17 ರಂದು ಲಕ್ಷ ದೀಪೋತ್ಸವ ಹಾಗೂ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ ಎಂದು ಶ್ರೀ ವೀರಭದ್ರಸ್ವಾಮಿ ಸೇವಾ ಸಮಿತಿಯ ಕಾರ್ಯಧ್ಯಕ್ಷರಾದ ಎಂ.ವಿ. ಬಸವರಾಜು ತಿಳಿಸಿದ್ದಾರೆ.
ನವಂಬರ್ 17ರಂದು ಸೋಮವಾರ ಬೆಳಗ್ಗೆ 6 ಗಂಟೆಯಿಂದ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರ ಸ್ವಾಮಿ ಅವರಿಗೆ ಗಣಪತಿ ಹೋಮ ಪ್ರಾರ್ಥನೆ, ಗಂಗಾ ಪೂಜೆ, ಗಣಪತಿ ಪೂಜೆ, ಮಹಾಸಂಕಲ್ಪ ಪುಣ್ಯಹವಾಚನ, ಪಂಚಗವ್ಯ, ಮೂಲ ದೇವರಿಗೆ ಅನುಜ್ಞೆ, ಕಳಸಸ್ಥಾಪನೆ, ವೇದಕಾರ್ಚನೆ, ಗಣಪತಿ ಹೋಮ ಇನ್ನೂ ಮುಂತಾದ ಹೋಮಗಳನ್ನು ಮಾಡಲಾಗುತ್ತದೆ.
ಇದೇ ದಿನ ಸಂಜೆ 6 ಗಂಟೆಗೆ ಲಕ್ಷ ದೀಪೋತ್ಸವ ನಡೆಯುತ್ತದೆ.ನಂತರ ಕರಡಿ ವ್ಯಾಧ್ಯ, ಲಿಂಗದ ವೀರರ ಕುಣಿ, ಬಾಣ ಬಿರುಸು ಬಾಣಗಳಿಂದ ಬೆಳ್ಳಿಪಲ್ಲಕ್ಕಿ ಉತ್ಸವ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಸಂಜೆ ಶ್ರೀವೀರಭದ್ರಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ ಎಂದು ನಾಟಕ ಮಂಡಳಿಯು ತಿಳಿಸಿದೆ.





