ಗುಬ್ಬಿ: ಸಾಮಾಜಿಕ ನ್ಯಾಯವನ್ನು ಒದಗಿಸಲು ಸಾಮಾಜಿಕ ಮತ್ತು ಶೈಕ್ಷಣಿಕ
ಸಮೀಕ್ಷೆ ಮಾಡುವುದು ಅತ್ಯವಶ್ಯಕತೆ ಇದೆ. ಮೀಸಲಾತಿ ಫಲ ಅನುಭವಿಸಲು ಹಿಂದುಳಿದ ವರ್ಗಗಳ ಎಲ್ಲಾ ಸಮುದಾಯ ಒಗ್ಗೂಡಿ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ದಿಕ್ಕುತಪ್ಪಿಸುವ ಹೇಳಿಕೆಗೆ ಮರಳಾಗಬಾರದು. ಸಮೀಕ್ಷೆ ಕುರಿತ ವಿಚಾರ ಸಂಕಿರಣದಲ್ಲಿ ಎಲ್ಲರೂ ಪಾಲ್ಗೊಳ್ಳಿ ಎಂದು ಜಾಗೃತ ಕರ್ನಾಟಕ ಸದಸ್ಯ, ವಕೀಲ ಕಿಶೋರ್ ಕರೆ ನೀಡಿದರು.

ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈಸೂರು ಅರಸರ ಕಾಲದಲ್ಲಿ ನಡೆದ ಸಮೀಕ್ಷೆಯಿಂದಲೂ ಇಲ್ಲಿಯವರೆಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಪಟ್ಟಭದ್ರರು ವಿರೋಧಿಸುತ್ತಲೇ ಬಂದಿದ್ದಾರೆ. ಸಂವಿಧಾನ ಬದ್ಧ ಸಾಮಾಜಿಕ ನ್ಯಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಸಮೀಕ್ಷೆ ಕಾರ್ಯ ಕೈಗೆತ್ತಿಕೊಂಡಿರುವುದು ಸ್ವಾಗತಾರ್ಹ ಎಂದರು.

ಪಟ್ಟಭದ್ರ ಹಿತಾಸಕ್ತಿಗಳು ಹಿಂದುಳಿದ ವರ್ಗಗಳ ಒಗ್ಗೂಡುವ ಕಾರ್ಯಕ್ಕೆ ಅಡ್ಡಿ ಪಡಿಸುತ್ತಿವೆ. ಸಮೀಕ್ಷೆಯಲ್ಲಿ ಭಾಗವಹಿಸಬೇಡಿ ಎಂದು ಹೇಳಿಕೆ ಕೊಡುತ್ತಾ ಅವರ ಸಮುದಾಯಕ್ಕೆ ಮೋಸ ಮಾಡುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷದ ಪ್ರಹ್ಲಾದ್ ಜೋಷಿ ಮತಾಂತರಕ್ಕೆ ಈ ಸಮೀಕ್ಷೆ ಕಾರಣ ಎನ್ನುತ್ತಾರೆ. ಮರು ಪ್ರಶ್ನೆ ಮಾಡಿದರೆ ಸಮಂಜಸ ಉತ್ತರ ನೀಡಲಿಲ್ಲ. ಕೇಂದ್ರ ಸಚಿವ ತುಮಕೂರು ಸಂಸದ ಸೋಮಣ್ಣ ಅವರು ಘನತೆಗೆ ತಕ್ಕನಾಗಿ ಮಾತನಾಡದೆ ಮೇಲ್ಜಾತಿಗೆ ಮೋಸ ಆಗುತ್ತದೆ ಹಾಗೆಯೇ ತುಳಿಯಲ್ಪಟ್ಟಿದೆ ಎನ್ನುತ್ತಾರೆ. ಈ ಬಾಲಿಶ ಹೇಳಿಕೆಗಳು ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಮೀಕ್ಷೆಯ ಅವಶ್ಯಕತೆ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಿದೆ ಎಂದರು.

ಸಮೀಕ್ಷೆ ನಂತರ ಮಾಹಿತಿ ಬಹಿರಂಗ ಪಡಿಸಿ ಸರ್ಕಾರ ಸಾಮಾಜಿಕ ನ್ಯಾಯವನ್ನು ಒದಗಿಸುವ ಕೆಲಸ ಮಾಡಬೇಕಿದೆ. ಈ ಕಾರ್ಯಕ್ಕೆ ಹಿಂದುಳಿದ ವರ್ಗಗಳಲ್ಲಿ ಜಾಗೃತಿ ಮೂಡಬೇಕಿದೆ. ಈ ನಿಟ್ಟಿನಲ್ಲಿ ಜಾಗೃತ ಕರ್ನಾಟಕ ಸಂಘಟನೆಯಿಂದ ಇದೇ ತಿಂಗಳ 18 ರಂದು ” ಕರ್ನಾಟಕ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ – 2025 :
ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ?” ಎಂಬ ವಿಷಯ ಕುರಿತು ವಿಚಾರಗೋಷ್ಠಿ ಆಯೋಜಿಸಿದೆ. ತುಮಕೂರು ನಗರದ ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ತಿನ ಸದಸ್ಯ ಯತೀಂದ್ರ ಸಿದ್ಧರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ಜಾಗೃತ ಕರ್ನಾಟಕದ ಡಾ.ವಾಸು ಎಚ್. ವಿ ವಿಷಯ ಮಂಡಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಸಮುದಾಯದ ಮುಖಂಡರು ಭಾಗವಹಿಸಿ ಹಿಂದುಳಿದ ವರ್ಗಗಳ ಒಗ್ಗಟ್ಟು ಪ್ರದರ್ಶನಕ್ಕೆ ಸಾಕ್ಷಿಯಾಗಲಿದ್ದಾರೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲಾ ಹಿಂದುಳಿದ ವರ್ಗಗಳ ಸಮುದಾಯದ ವರು ಕಾರ್ಯಕ್ರಮಕ್ಕೆ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಜಾಗೃತ ಕರ್ನಾಟಕ ಸದಸ್ಯ ಆದಂ ಖಾನ್ ಇದ್ದರು.

LEAVE A REPLY

Please enter your comment!
Please enter your name here