ಗುಬ್ಬಿ: ಭಕ್ತಿ ಬರಬೇಕಾದರೆ ಮನಸ್ಸು ಪರಿಶುದ್ಧವಾಗಿರಬೇಕು ಎಂಬುದು ಹಿಂದೂ ಧರ್ಮದ ಸಾರಾಂಶ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.

ಪಟ್ಟಣದ ಮಡಿವಾಳರ ಬೀದಿಯಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಮಹೇಶ್ವರಮ್ಮ ದೇವಿಯ ದೇವಾಲಯದ ನೂತನ ಶಿಲಾ ದೇವಾಲಯ ಲೋಕಾರ್ಪಣೆಯ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ನಂಬಿಕೆಯಿಂದ ದೇವರನ್ನು ಕಾಣಬಹುದು. ಇಂದಿಗೂ ದೇವರನ್ನು ನೋಡಿಲ್ಲ, ಕೋಟ್ಯಾಂತರ ಜನರು ದೇವರ ಮೇಲೆ ನಂಬಿಕೆ ಇಟ್ಟುಕೊಂಡು ಗುಡಿಗಳನ್ನು ಕಟ್ಟುತ್ತಾರೆ.
ನಮ್ಮ ನಡೆ ನುಡಿ ಸರಿಯಾಗಿರಬೇಕು. ನಾವು ಮಾಡುವ ಕೆಲಸದಲ್ಲೇ ದೇವರನ್ನು ಕಾಣಬೇಕು. ಸಹಾಯ ಮಾಡಿದವರನ್ನು ದೇವರೆಂದು ಪೂಜಿಸುತ್ತಾರೆ. ಸಹಾಯ ಮಾಡುವುದರಲ್ಲೂ ಸಹ ದೇವರನ್ನು ಕಾಣಬಹುದು.
12ನೇ ಶತಮಾನದಲ್ಲಿ ಬಸವಣ್ಣನವರು ವಿಶ್ವದಲ್ಲೇ ಪ್ರಥಮ ಬಾರಿಗೆ ಅನುಭವ ಮಂಟಪ ಮಾಡಿದವರು. ಅನುಭವ ಮಂಟದಲ್ಲಿ ಎಲ್ಲಾ ಜಾತಿ ಧರ್ಮದವರಿಗೂ ಅವಕಾಶ ಮಾಡಿಕೊಟ್ಟಂತಹ ಮಹಾನ್ ಪುರುಷ ಬಸವಣ್ಣ. ಜನಸಮುದಾಯಕ್ಕೆ ಎಲ್ಲರೂ ಒಂದೇ ಎಂದು ಹೇಳಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೊದಲನೆ ಪುಟದಲ್ಲಿ ಬಸವಣ್ಣನವರು ಸಾರಿದ ತತ್ವಗಳನ್ನು ಬಗ್ಗೆ ಬರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇವಾಲಗಳಿಗೆ ಹೋಗುತ್ತಿರುವುದು ಹೆಚ್ಚಾಗಿದೆ. ಆದರೂ ಮನುಷ್ಯನ ಭಾವನೆ ಬದಲಾಗುತ್ತಿಲ್ಲ ಎಂದರು.

ಮಧುಗಿರಿ, ಪಾವಗಡಕ್ಕೆ ಪೊಲೀಸ್ ಇಲಾಖೆಗೆ ವಸತಿಗೃಹಗಳನ್ನು ಕೊಟ್ಟಿದ್ದೇನೆ. ಗುಬ್ಬಿ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ಹಾಗೂ ಚೇಳೂರು ವಸತಿ ಗೃಹಗಳ ಬಗ್ಗೆ ಪ್ರಸ್ತಾವನೆ ಕೊಟ್ಟರೆ ಮಂಜೂರು ಮಾಡಿಸುತ್ತೇನೆ ಎಂದು ತಿಳಿಸಿದರು.

ಕೆ ಎಸ್ ಆರ್ ಟಿ ಸಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ನಾನು ರಾಜಕೀಯಕ್ಕೆ ಬರುವುದಕ್ಕಿಂತ ಮುಂಚೆ ದೇವರನ್ನು ನಂಬುತ್ತಿರಲಿಲ್ಲ, ನಾನು ರಾಜಕೀಯಕ್ಕೆ ಬಂದ ಮೇಲೆ ದೇವಾಲಯಗಳಿಗೆ ಹೆಚ್ಚು ಅನುದಾನ ನೀಡಿದ್ದೇನೆ. ಒಳ್ಳೆಯ ಮಾರ್ಗದಲ್ಲಿ ಒಳ್ಳೆಯ ಕೆಲಸ ಮಾಡಿದರೆ ಅದೇ ನಮಗೆ ಒಳ್ಳೆದಾಗುತ್ತದೆ. ಅವಕಾಶ ಸಿಕ್ಕಾಗ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ರಾಜಕೀಯಕ್ಕೆ ಬಂದ ಮೇಲೆ ಬಡವರ ಪರ ಶೋಷಿತ ವರ್ಗದವರ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ. ಹುಟ್ಟು ಸಾವು ನಿಶ್ಚಿತ ನಾವು ಇರುವ ಸಮಯ ಉತ್ತಮ ಕೆಲಸಗಳನ್ನು ಮಾಡಬೇಕಾಗುತ್ತದೆ. ಉತ್ತಮ ಆದರ್ಶಗಳನ್ನು ಮೈಗೊಳಿಸಿಕೊಳ್ಳಬೇಕು. ಜನ ಸೇವೆಗೆ ಉತ್ಸುಕರಾಗಿ ಒಳ್ಳೆಯ ರೀತಿಯ ಕೆಲಸ ಕಾರ್ಯಗಳನ್ನು ಮಾಡಬೇಕು. ಸ್ಥಳಾವಕಾಶವಿದ್ದರೆ ಸಮುದಾಯ ಭವನದ ನಿರ್ಮಾಣಕ್ಕೆ ಸಹಾಯಧನ ಬಿಡುಗಡೆ ಮಾಡಿಸುತ್ತೇನೆ ಎಂದರು.

ಚಾಲುಕ್ಯ ಆಸ್ಪತ್ರೆಯ ಮುಖ್ಯಸ್ಥ ಡಾ.ನಾಗಭೂಷಣ್ ಮಾತನಾಡಿ ಗುಬ್ಬಿ ನಗರದಲ್ಲಿ ಹೈಟೆಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಇದಕ್ಕೆ ತಾಲೂಕಿನ ಹೆಣ್ಣುಮಗಳಾದ ಸಾಲುಮರದ ತಿಮ್ಮಕ್ಕನ ಹೆಸರಿಡಬೇಕೆಂದು ಸಚಿವರಲ್ಲಿ ಮನವಿ ಮಾಡಿಕೊಂಡರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಭಕ್ತಾದಿಗಳ ಸಹಕಾರದಿಂದ ಮಹೇಶ್ವರಮ್ಮ ದೇವಾಲಯದ ಕಳಸ ಗೋಪುರ ನಿರ್ಮಾಣ ಮಾಡಿ, ಲೋಕಾರ್ಪಣೆ ಮಾಡಿದ್ದು ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅನುಕೂಲಕ್ಕಾಗಿ ಹಾಗೂ ದಾಸೋಹ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಸಮುದಾಯ ಭವನದ ಅವಶ್ಯಕತೆ ಇರುವುದರಿಂದ ಸಚಿವರು ಹಾಗೂ ಶಾಸಕರು ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಧಾರ್ಮಿಕ ಸಮಾರಂಭದಲ್ಲಿ ತೇವಡಿಹಳ್ಳಿ ಮಠಾಧ್ಯಕ್ಷ ಗೋಸಲಚನ್ನಬಸವೇಶ್ವರ ಶಿವಾಚಾರ್ಯ, ತೊರೆಮಠದ ಅಡವಿ ಚನ್ನಬಸವಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ, ವೆಂಕಟೇಗೌಡ, ಚನ್ನಬಸವಣ್ಣ, ಬಸವರಾಜು, ಗಂಗಾಧರ್, ಛಲವಾದಿ ಮಹಾಸಭಾ ಅಧ್ಯಕ್ಷ ಟಿ.ಇ.ಈರಣ್ಣ, ಪ್ರಧಾನ ಕಾರ್ಯದರ್ಶಿ ಯತೀಶ್, ಮಹೇಶ್, ನವೀನ್, ಯೋಗೀಶ್, ಕಿಟ್ಟದಕುಪ್ಪೆ ನಾಗರಾಜು, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಂಜುಳಾದೇವಿ, ಮಾಜಿ ಸದಸ್ಯರುಗಳು, ಮಹೇಶ್ವರಮ್ಮದೇವಿ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸಾವಿರಾರು ಭಕ್ತರು ಆಗಮಿಸಿದ್ದರು.

LEAVE A REPLY

Please enter your comment!
Please enter your name here