
ಗುಬ್ಬಿ : ಪಟ್ಟಣದ ಎವಿಕೆ ಸಮುದಾಯ ಭವನದಲ್ಲಿ ಮಾರ್ಚ್ 28 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಶ್ರೀ ಅಗ್ನಿಬನ್ನಿರಾಯಸ್ವಾಮಿ ಜಯಂತೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಅಗ್ನಿವಂಶ ಕ್ಷತ್ರಿಯ(ತಿಗಳ)ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಬಲರಾಮಯ್ಯ ತಿಳಿಸಿದರು.
ಪಟ್ಟಣದ ಶ್ರೀ ಅಗ್ನಿವಂಶಕ್ಷತ್ರಿಯ (ತಿಗಳ) ವಿದ್ಯಾಭಿವೃದ್ಧಿ ಸಂಘ (ರಿ.) ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿವರ್ಷ ಶ್ರೀ ಅಗ್ನಿಬನ್ನಿರಾಯಸ್ವಾಮಿಯ ಜಯಂತೋತ್ಸವದ ಅಂಗವಾಗಿ ಎವಿಕೆ ಸಮುದಾಯ ಭವನದಲ್ಲಿ ಧಾರ್ಮಿಕ ಸಮಾರಂಭ ಹಾಗೂ ಸಾಂಸ್ಕೃತಿಕ ಮತ್ತು ಉಪನ್ಯಾಸ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಗೆ ನಡೆಯುತ್ತದೆ. ಆರನೇ ವರ್ಷದ ಜಯಂತೋತ್ಸವ ಕಾರ್ಯಕ್ರಮಕ್ಕೆ ಸುಮಾರು ಐದು ಸಾವಿರಕ್ಕೂ ಅಧಿಕ ಜನರು ಭಾಗವಹಿಸುವರು ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಜಿ.ಬಿ.ಮಲ್ಲಪ್ಪ ಮಾತನಾಡಿ, ಪ್ರತಿ ವರ್ಷ ಮಾರ್ಚ್ 28ರಂದು ಶ್ರೀ ಅಗ್ನಿ ಬನ್ನಿರಾಯ ಜಯಂತಿ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದು, ಈ ಕಾರ್ಯಕ್ರಮಕ್ಕೆ ನಮ್ಮ ಜನಾಂಗದ ಯಜಮಾನರು, ಆಣೆಕಾರರು, ಮುದ್ರೆಯವರು, ತಿಗಳ ಜನಾಂಗದ ಬಂಧುಗಳು ಹಾಗೂ 18 ಕೋಮುವಿನ ಮುಖಂಡರುಗಳು ಇತರ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಬೇಕೆಂದು ಮನವಿ ಮಾಡಿದರು.
ನಿರ್ದೇಶಕರಾದ ಉಂಡೆ ರಾಮಯ್ಯ ಮಾತನಾಡಿ ಪ್ರತಿ ವರ್ಷದಂತೆ ನಡೆಯುವ ಜಯಂತೋತ್ಸವ ಕಾರ್ಯಕ್ರಮಕ್ಕೆ ತಾಲೂಕಿನ ಶಾಸಕರಾದ ಎಸ್.ಆರ್ ಶ್ರೀನಿವಾಸ್, ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣನವರು ಹಾಗೂ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ ಟಿ ಕೃಷ್ಣಪ್ಪನವರು ಮತ್ತಿತರರು ಗಣ್ಯರು ಭಾಗವಹಿಸುತ್ತಾರೆ. ಸಮುದಾಯದ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಸಮಯಕ್ಕೆ ಸರಿಯಾಗಿ ಬಂದು ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು ಎಂದು ಮನವಿ ಮಾಡಿದರು.

ನಿರ್ದೇಶಕರಾದ ಟಿ ವೈ ಯೋಗಾನಂದಕುಮಾರ್ ಮಾತನಾಡಿ, ಅಗ್ನಿ ಕ್ಷತ್ರಿಯ ವಂಶದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ ಗುಬ್ಬಿ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಿಂದ ಎವಿಕೆ ಸಮುದಾಯದ ಭವನದವರೆಗೆ ಬನ್ನಿರಾಯಿ ಸ್ವಾಮಿಯ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಕೂರಿಸಿ ಆಕರ್ಷಕ 201 ಕುಂಬಗಳೊಂದಿಗೆ ಡಂಕವಾದ್ಯ ವೀರಗಾಸೆ ನೃತ್ಯ, ನಂದಿಧ್ವಜ ಕುಣಿತ, ಮಂಗಳವಾದ್ಯ, ಹಲವು ಸಾಂಸ್ಕೃತಿಕ ಜಾನಪದ ಕಲಾತಂಡಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.
ಸಂಘದ ಗೌರವಾಧ್ಯಕ್ಷ ಎಸ್.ನಂಜೇಗೌಡ್ರು ಮಾತನಾಡಿ ಬೃಹತ್ ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಮಜ್ಜಿಗೆ, ಪಾನಕ, ಹೆಸರು ಬೇಳೆ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹನುಮಂತಯ್ಯ ಉಪಾಧ್ಯಕ್ಷರಾದ ಎನ್.ಸಿ. ಶಿವಣ್ಣ, ಪಿ.ಟಿ ಸಣ್ಣರಂಗಯ್ಯ, ಜಂಟಿ ಕಾರ್ಯದರ್ಶಿ ಜಿ ಬಿ ನಾಗರಾಜು, ಜೆಸಿ ಲೋಕೇಶ್ ಬಾಬು, ರಾಜಣ್ಣ, ರಾಮಚಂದ್ರಯ್ಯ, ಲಕ್ಕಣ್ಣ, ಸಣ್ಣ ಹನುಮಂತಯ್ಯ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು .






