ಗುಬ್ಬಿ  : ಸಿನಿಮಾ ಅಥವಾ ಟಿವಿಗಿಂತಲೂ ರಂಗಭೂಮಿ ವಿಭಿನ್ನವಾದುದು, ಏಕೆಂದರೆ ಇಲ್ಲಿ ಕಲಾವಿದ ಮತ್ತು ಪ್ರೇಕ್ಷಕರ ನಡುವೆ ನೇರವಾದ ತುಡಿತವಿರುತ್ತದೆ ಎಂದು  ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು

ತಾಲ್ಲೂಕಿನ ಕಡಬ ಹೋಬಳಿಯ ಕೆ.ಜಿ ಟೆಂಪಲ್ ಗ್ರಾಮದಲ್ಲಿ ಶ್ರೀ ಕಾಳಿಕಂಠೇಶ್ವರ ಕೃಪಾಕೋಷಿತ ನಾಟಕ ಮಂಡಳಿ ವತಿಯಿಂದ ಏರ್ಪಡಿಸಿದ್ದ  ಕುರುಕ್ಷೇತ್ರ ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ  ಮಾತನಾಡಿದ ಅವರು ರಂಗಭೂಮಿಯನ್ನು ‘ಸಮಾಜದ ಕೈಗನ್ನಡಿ’ ಎನ್ನಲಾಗುತ್ತದೆ. ಸಮಾಜದಲ್ಲಿನ ಅನಿಷ್ಟ ಪದ್ಧತಿಗಳು, ರಾಜಕೀಯ ವಿದ್ಯಮಾನಗಳು ಮತ್ತು ಮಾನವೀಯ ಮೌಲ್ಯಗಳನ್ನು ರಂಗಭೂಮಿ ಅತ್ಯಂತ ಪರಿಣಾಮಕಾರಿಯಾಗಿ ಜನರ ಮುಂದೆ ತೆರೆದಿಡುತ್ತದೆ.

 ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಹೆಚ್ಚಿನ ರಂಗ ಕಲಾವಿದರು, ರಂಗ ನಿರ್ದೇಶಕರು  ತಬಲವಾದಕರು ಇದ್ದು,  ಕಲೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಕಲಾಭಿಮಾನಿಗಳು ನಾಟಕಗಳನ್ನು ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ತಿಳಿಸಿದರು. 

ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಗುಬ್ಬಿ ಕಂಪನಿ ಹೇಗೆ ರಂಗಭೂಮಿಯಲ್ಲಿ ಹೆಸರು ಗಳಿಸಿದೆಯೋ, ಅದೇ ರೀತಿ ಕೆಜಿ ಟೆಂಪಲ್ ಮುಂದೆ ಕಲೆಗೆ ಹೆಸರುವಾಸಿಯಾಗುತ್ತದೆ. ವರ್ಷಪೂರ್ತಿ ಕೆ ಜಿ ಟೆಂಪಲ್ ನಲ್ಲಿ ರಂಗ ಚಟುವಟಿಕೆಗಳು ನಡೆಯುತ್ತಿದ್ದು ಇಲ್ಲಿ ನುರಿತ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದರು.

ಕಲಾ ಪ್ರೋತ್ಸಾಹಕ ಹೊನ್ನಗಿರಿಗೌಡ ಮಾತನಾಡಿ ಕುರುಕ್ಷೇತ್ರ ನಾಟಕದ ಮೌಲ್ಯಗಳನ್ನು ಪ್ರತಿಯೊಬ್ಬರು ತನ್ನ ಜೀವನದಲ್ಲಿ ಅಳವಡಿಸಿಕೊಂಡಾಗ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುನ್ನಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಕೆಎಎಸ್ ಅಧಿಕಾರಿ ಪಾತರಾಜು, ರಂಜಿತ್ ಕಾಳೇನಹಳ್ಳಿ, ಸಿಎಸ್ ಪುರ ಜೆ ಪಿ ಬಸವರಾಜು, ಬೋರೆಗೌಡ, ಕುಮಾರ್, ಉಮೇಶ್, ನರಸಿಂಹಮೂರ್ತಿ, ಶಿವಣ್ಣ, ರಾಜಣ್ಣ, ನರಸಿಂಹಮೂರ್ತಿ, ಕಾರ್ತಿಕ್, ಕೃಷ್ಣಪ್ಪ, ಕೆ.ಜಿ.ನಾರಾಯಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here