ತಿಪಟೂರು : ವ್ಯಾಪಾರದಲ್ಲಿ ಲಾಭ ಮಾಡುವ ಆಸೆ ಇಟ್ಟುಕೊಳ್ಳಿ ಆದರೆ ದುರಾಸೆ ಬೇಡ ಎಂದು ಜಿ.ಕೆ.ವಿ.ಕೆಯ ವಿಸ್ತರಣಾ ನಿರ್ದೇಶಕರು ಡಾ. ವೈ.ಎನ್. ಶಿವಲಿಂಗಯ್ಯ ತಿಳಿಸಿದರು.

ತಾಲ್ಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರಲ್ಲಿ ಕೃಷಿ ವಿಸ್ತರಣಾ ನಿರ್ವಹಣಾ ರಾಷ್ಟ್ರೀಯ ಸಂಸ್ಥೆ (ಮ್ಯಾನೇಜ್.) ಹೈದರಾಬಾದ್ ವಿಸ್ತರಣಾ ನಿರ್ದೇಶನಾಲಯ, ಸಮೇತಿ (ದಕ್ಷಿಣ) ಕೃ.ವಿ.ವಿ. ಬೆಂಗಳೂರು. ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮ (DAESI) 8 ನೇ ತಂಡದ ಪ್ರಮಾಣ ಪತ್ರಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿ, ದೇಸಿ ತರಬೇತಿ ಪಡೆದು ಕ್ಷೇತ್ರದಲ್ಲಿ ರೈತರೊಂದಿಗೆ ವ್ಯವಹಾರ ಮಾಡುವಾಗ ಪ್ರಾಮಾಣಿಕವಾಗಿ ವ್ಯವಹಾರ ಇಟ್ಟುಕೊಳ್ಳಬೇಕು.ಇತ್ತೀಚಿನ ದಿನಗಳಲ್ಲಿ ರೈತರಿಗೆ ಸುಧಾರಿತ ತಳಿಗಳನ್ನು ಬಳಸುವಂತೆ ಪ್ರೋತ್ಸಾಹಿಸಬೇಕು. ಹೈನುಗಾರಿಕೆ ಹೆಚ್ಚು ಒತ್ತು ನೀಡುವ ಮೂಲಕ ಕೃಷಿ ಚಟುವಟಿಕೆಗಳನ್ನು ಮಾಡಬೇಕು. ರೈತರು ಯಾವುದೇ ಕಾರಣಕ್ಕೂ ಭೂಮಿಯನ್ನು ಕಳೆದುಕೊಳ್ಳಬಾರದು. ವ್ಯಾಪಾರ ಮಾಡಲು ಕೌಶಲ್ಯಗಳನ್ನು ಕಲಿತುಕೊಳ್ಳಬೇಕು ಎಂದು ತಿಳಿಸಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪವನ್ ಮಾತನಾಡಿ, ದೇಸಿ ತರಬೇತಿ ಪಡೆದುಕೊಂಡ ಎಲ್ಲಾ ವ್ಯಕ್ತಿಗಳು ಸೇವಾ ಮನೋಭಾವವನ್ನು ಇಟ್ಟುಕೊಂಡು ರೈತರ ತಾಕುಗಳಲ್ಲಿ ಮಾಹಿತಿ ನೀಡಿದಾಗ ತಮ್ಮ ಅಂಗಡಿಗಳಲ್ಲಿ ವ್ಯಾಪಾರ ಉತ್ತಮ ರೀತಿಯಲ್ಲಿ ಸಾಗುತ್ತದೆ. ರೈತರಿಗೆ ಗೊಬ್ಬರ ಮತ್ತು ಕೀಟನಾಶಕವನ್ನು ನೀಡುವಾಗ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಒಂದು ವೇಳೆ ಸಮಸ್ಯೆಗಳು ಉಂಟಾದರೆ ದಂಡ ತೆರಬೇಕಾಗುತ್ತದೆ. ಆದ್ದರಿಂದ ಮಂಜಾಗ್ರತವಾಗಿ ಸಮಸ್ಯೆಗಳಿಗೆ ಸೂಕ್ತ ಔಷಧಿ ಮತ್ತು ಗೊಬ್ಬರಗಳನ್ನು ನೀಡಬೇಕು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಡಾ. ಶಂಕರ ಎಂ.ಹೆಚ್ ಮಾತನಾಡಿ, ಇಲ್ಲಿ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳು ರೈತರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿದಾಗ ಮಾತ್ರ ತರಬೇತಿ ಪಡೆದಿದ್ದು ಸಾರ್ಥಕವಾಗುತ್ತದೆ ಎಂದು ತಿಳಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ಪಶುಪಾಲನ ವಿಭಾಗದ ಶಿವಪ್ಪ ನಾಯಕ, ವಿಜ್ಞಾನಿಗಳಾದ ಎಂ.ಈ.ದರ್ಶನ್, ಡಾ.ಕೀರ್ತಿಶಂಕರ್, ತಸ್ಮಯ, ಗಾನವಿ, ದೇಸಿ ಅನುವುಗಾರ ಟಿ.ವಿ. ಶ್ರೀಧರಮೂರ್ತಿ, ದೇಸಿ ತರಬೇತಿ ಶಿಭಿರಾರ್ಥಿಗಳು ಮತ್ತಿತರರು ಇದ್ದರು.





