ಗುಬ್ಬಿ: ರಾಜ್ಯದಲ್ಲೇ ಇಷ್ಟೊಂದು ಸುಸಜ್ಜಿತವಾದ ರಂಗಮಂದಿರವಿಲ್ಲ ಎಂದು ಖ್ಯಾತ ರಂಗಕರ್ಮಿ, ನಟ, ನಿರ್ದೇಶಕ ಮಂಡ್ಯ ರಮೇಶ್ ಅಭಿಪ್ರಾಯಪಟ್ಟರು.

 ಪಟ್ಟಣದಲ್ಲಿ ಮೂರು ದಿನಗಳ ಕಾಲ ಡಾ. ಗುಬ್ಬಿ ವೀರಣ್ಣ ಟ್ರಸ್ಟ್‌ ಹಾಗೂ ಮಾಲತಮ್ಮ ಆರ್ಟ್ ಫೌಂಡೇಶನ್ ವತಿಯಿಂದ ಜರುಗಿದ ನಾಟಕೋತ್ಸವ ಕಾರ್ಯಕ್ರಮದಲ್ಲಿ ಮಂಡ್ಯ ರಮೇಶ್ ನಿರ್ದೇಶನದ   ಸ್ಥಾವರವೊ ಜಂಗಮ ನಾಟಕ ಪ್ರದರ್ಶನ ಸಂದರ್ಭದಲ್ಲಿ ಮಾತನಾಡಿ, ಗುಬ್ಬಿ ವೀರಣ್ಣನವರ ಜನ್ಮಭೂಮಿ ಗುಬ್ಬಿಯಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು ನಮ್ಮ ಪುಣ್ಯ. ರಂಗಭೂಮಿ ಮಹಾನ್ ದಿಗ್ಗಜ ವೀರಣ್ಣನವರ ಗರಡಿಯಲ್ಲಿ ಈ ನಾಡಿನ ಅನೇಕ ಮಹಾನ್ ನಟರು ಬೆಳೆದಿದ್ದಾರೆ. ಡಾ.ವೀರಣ್ಣ ಅವರ ಮೊಮ್ಮಗಳಾದ ಬಿ.ಜಯಶ್ರೀ ಅವರು ನನಗೆ ನಾಗಮಂಡಲ ಚಲನಚಿತ್ರದಿಂದ ಹೊಸ ಹುರುಪು ನೀಡಿದ್ದಾರೆ ಎಂದರು.

  ನಾಟಕದ ಕುರಿತು ನಿರ್ದೇಶಕರ ಮಾತು:  ಒಂದಷ್ಟು ದಶಕಗಳಿಂದ ಈಚೆ ಮೊಬೈಲ್ ನಮ್ಮ ಕೈಗೆ ಬಂದ ಮೇಲೆ ಜಗತ್ತಿನ ಆಗು ಹೋಗುಗಳನ್ನು ವರದಿಯಾಗಿ, ವಾರ್ತೆಯಾಗಿ ಗಮನಿಸುವಾಗ ಎಚ್ಚರ ವಹಿಸಬೇಕಾದಂತಹ ಅನೇಕ ವಿಷಯಗಳನ್ನ ಮರೆತು, ನಾನು ನನ್ನದು ನಮ್ಮದೇ ಅನ್ನುತ್ತಾ. ನಮ್ಮ ಭೂಮಿ ಅನ್ನುವ ಬದಲು ನನ್ನ ಜಾತಿ ಅಂತ ವಾದಿಸುವ ಜನರೇ ಹೆಚ್ಚಾಗಿರುವ ಈ ದಿನಗಳಲ್ಲಿ ನಮ್ಮಲ್ಲಿ ಆಗಿ ಹೋದ ಅತ್ಯದ್ಭುತ ಮಹಾಪುರುಷರು ಮತ್ತು ನಮ್ಮ ಕಲ್ಪನೆಯಲ್ಲಿರುವ ಎಲ್ಲಾ ದೇವರುಗಳು, ಸಕಾರಾತ್ಮಕವಾಗಿ ಯೋಚಿಸಬಹುದಾದಂತಹ ವ್ಯಕ್ತಿಗಳನ್ನು ಕೂಡ ನಾವು ಸಂಕುಚಿತಗೊಳಿಸುತ್ತಿದ್ದೇವೆ. ಮತ್ತು ಅವರನ್ನು ಸಣ್ಣದೊಂದು ವೃತ್ತದಲ್ಲಿ ಸಿಕ್ಕಿ ಹಾಕಿಸಿ ಹೊರಬರಲು ಸಾಧ್ಯವಾಗದ ಹಾಗೆ ನಾವೇ ಕೆಟ್ಟದಾಗಿ ಕಾವಲು ಕಾಯುತ್ತೇವೆ. ಇದರಿಂದ ಆ ವೃತ್ತಗಳ ನಡುವೆ ಸಿಕ್ಕಿಕೊಂಡಿರುವ ಆದರ್ಶಗಳು ಅನೇಕ ಬಾರಿ ನಿಸ್ತೇಜವಾಗಿ ಬಿಡುತ್ತದೆ ಎಂಬುದು ನನ್ನ ಆಪಾದನೆ ಎನ್ನುತ್ತಾರೆ.

ಟ್ರಸ್ಟ್ ಅಧ್ಯಕ್ಷೆ ಬಿ. ಜಯಶ್ರೀ, ಗುಬ್ಬಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯತೀಶ್, ಸಂಚಾಲಕ ರಾಜೇಶ್, ಎಚ್.ಎಂ. ರಂಗಯ್ಯ, ಲಕ್ಷ್ಮಣ್ ದಾಸ್, ನಾಟಕ ಪಾತ್ರದಾರಿಗಳು, ಪ್ರೆಕ್ಷಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here