
ಗುಬ್ಬಿ: ಕನ್ನಡ ಸಾಹಿತ್ಯದ ಲೇಖಕರಿಗೆ ಹಾಗೂ ಪ್ರಕಾಶಕರಿಗೆ ಸರ್ಕಾರ ಕಡೆಯಿಂದ ಸರಿಯಾದ ಪ್ರೋತ್ಸಾಹ ದೊರಕುತ್ತಿಲ್ಲ ಎಂದು ಸಮ್ಮೇಳನಾಧ್ಯಕ್ಷ ಸಂಶೋಧಕ, ಆರ್ಯವೇದ ವೈದ್ಯ ಡಾ. ಬಿ. ನಂಜುಂಡಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ತಾಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆವಹಿಸಿಕೊಂಡು ಮಾತನಾಡಿ, ಸಾಹಿತ್ಯ ಕೃತಿಗಳು ಹೆಚ್ಚೆಚ್ಚು ಪ್ರಕಟವಾಗಿ ಕನ್ನಡ ಭಾಷೆ ಬೆಳೆಯಲು ಸಹಕಾರಿಯಾಗುತ್ತದೆ. ಸರ್ಕಾರ ಇತ್ತಕಡೆ ಶೀಘ್ರ ಗಮನಹರಿಸಿ ಪುಸ್ತಕೋದ್ಯಮವನ್ನು ರಕ್ಷಿಸಬೇಕಾಗಿದೆ.
ಇತ್ತಿಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿಯ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚುವ ಹಂತವನ್ನು ತಲುಪಿದೆ. ಇದಕ್ಕೆ ಸರ್ಕಾರ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನ ಪ್ರೋತ್ಸಾಹಿಸುತ್ತಿರುವುದೇ ಕಾರಣವಾಗಿದೆ. ಹೀಗಾದಾಗ ಕನ್ನಡ ಎಲ್ಲಿಂದ ಉಳಿಯಬೇಕು. ಗಾಮಾಂತರ ಪ್ರದೇಶಗಳಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸಬೇಕು. ಶಾಲಾ ಶಿಕ್ಷಕರನ್ನು ನೇಮಿಸಿ ಗುಣಭರಿತ ಮತ್ತು ಪಠ್ಯಗಳನ್ನು ಅಳವಡಿಸಬೇಕು.

ಕರ್ನಾಟಕದ ಹಲವಾರು ತಾಲೂಕುಗಳಂತೆ ಗುಬ್ಬಿಯನ್ನು ಸಾಧಾರಣವಾದ ತಾಲೂಕು ಎಂದು ಪರಿಗಣಿಸಬಾರದು.ಈ ತಾಲೂಕಿಗೆ ಒಂದು ಐತಿಹಾಸಿಕ ಪರಂಪರೆಯ ಮಹತ್ವವಿದೆ. ಸಾಹಿತ್ಯ ಮತ್ತು ಧಾರ್ಮಿಕ ದೃಷ್ಟಿಯಿಂದ ನೋಡುವುದಾದರೆ ಕನ್ನಡ ಸಾಹಿತ್ಯದ ಮೊದಲ ಕ್ರಾಂತಿ ಕಲ್ಯಾಣದಲ್ಲಾದರೆ ಎರಡನೇ ಕ್ರಾಂತಿ ಗುಬ್ಬಿಯಲ್ಲಿ ಸಂಭವಿಸಿದೆ. ಅದೇ ರೀತಿ ವೀರಶೈವ ಲಿಂಗಾಯಿತರ ಮೊದಲ ಕ್ರಾಂತಿ ಕಲ್ಯಾಣದಲ್ಲಾದರೆ ಅದರ ಪುನರುಜ್ಜೀವನ ಗುಬ್ಬಿ ತಾಲೂಕಿನಲ್ಲಿ ಸಂಭವಿಸಿರುವುದು ಚಾರಿತ್ರಿಕ ದಾಖಲೆಗಳು ತಿಳಿಸುತ್ತವೆ ಎಂದು ತಿಳಿಸಿದರು.
ಕಲೆಗಳ ನಾಡು ಗುಬ್ಬಿ ವೀರಗಾಸೆ, ನಂದಿಧ್ವಜ ಕುಣಿತ, ಲಿಂಗ ವೀರರ ಕುಣಿತ, ಕೋಲಾಟ, ಸೋಮನ ಕುಣಿತ, ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟ ಹೀಗೆ ಅನೇಕ ಗ್ರಾಮೀಣ ಸೊಗಡಿನ ಸಾಹಿತ್ಯದ ತವರೂರು ಇದಾಗಿದೆ. ವಚನ ಸಾಹಿತ್ಯದಲ್ಲಿ ಗುಬ್ಬಿ ಎರಡನೇ ಕಲ್ಯಾಣ ಎಂದೆನಿಸಿದೆ. ಗುಬ್ಬಿ ಚನ್ನಬಸವೇಶ್ವರರ ಬಗ್ಗೆ ಎಲ್ಲರಿಗೂ ತಿಳಿಸುವ ಕೆಲಸ ಮಾಡಿ ಹೊಸಹಳ್ಳಿ ಅರಸರ ರಾಜಗುರುಗಳಾಗಿ ನಡೆಸಿದ ವಚನ ಸಾಹಿತ್ಯ ಕೃಷಿ 70 ವರ್ಷ ನಡೆದಿತ್ತು. ಈ ಜೊತೆಗೆ ಗುಬ್ಬಿ ಮಲ್ಲಣ್ಣ, ಮಲ್ಲಣ್ಣಾರ್ಯಾ, ಗುಬ್ಬಿ ವೀರಣ್ಣ, ನಟ ಭಯಂಕರ ಗಂಗಾಧರಯ್ಯ, ಚಿ.ಉದಯಶಂಕರ್, ಸಾಲು ಮರದ ತಿಮ್ಮಕ್ಕ ಯಾರನ್ನೂ ಮರೆಯುವಂತಿಲ್ಲ. ಇಂತಹ ನೆಲೆಯ ಸಾಹಿತ್ಯ ಸಮ್ಮೇಳನ ನನಗೆ ತೃಪ್ತಿ ನೀಡಿದೆ ಎಂದರು.
ಕೋಡಿಹಳ್ಳಿ ಮಠದ ಮಠಾಧ್ಯಕ್ಷರಾದ ಬಸವಬೃಂಗೇಶ್ವರ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮರಿ ಕಲ್ಯಾಣ ಎಂದೇ ಉತ್ತರ ಕರ್ನಾಟಕದಲ್ಲಿ ಗುಬ್ಬಿ ಕ್ಷೇತ್ರ ಗುರುತಿಸಿಕೊಂಡಿದೆ. ಸಾಹಿತ್ಯಕ ಶ್ರೀಮಂತಿಕೆ ಇಲ್ಲಿದೆ. ಇಂದಿಗೂ ಸಾವಿರ ಬರವಣಿಗೆದಾರರು ಸಿಗುತ್ತಾರೆ. ಆದರೆ ಸಾಹಿತ್ಯಾಸಕ್ತಿ ಕೇವಲ ಸಿನಿಮಾ ಹಾಡಿನ ಸೀಮಿತವಾಗಿದೆ. ಕನ್ನಡ ಸಾಹಿತ್ಯಕ್ಕೆ ಎರಡೂವರೆ ವರ್ಷದ ಇತಿಹಾಸವಿದೆ. ಈಗಾಗಲೇ ಸುತ್ತಲಿನ ಅನ್ಯ ರಾಜ್ಯ ನಮ್ಮ ನೆಲ ಕಿತ್ತು ಸಾಹಿತ್ಯ ಕಿಟ್ಟುಕೊಳ್ಳುತ್ತಿದೆ. ನಮ್ಮ ಸಾಹಿತಿಗಳ ಬರವಣಿಗೆ ತಿರುಚುವ ಕೆಲಸ ನಡೆದಿದೆ. ಘೋರ ಸನ್ನಿವೇಶ ಎದುರಿಸುವ ಮುನ್ನ ನಮ್ಮ ಕನ್ನಡ ಸಾಹಿತ್ಯ ಉಳಿಸುವ ಕೆಲಸ ನಿರಂತರ ಮಾಡಬೇಕಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೀರ್ತನಾಕಾರ ಲಕ್ಷ್ಮಣ್ ದಾಸ್ ಮಾತನಾಡಿ ಹದಿನೆಂಟು ಕೋಮಿನ ಗುಬ್ಬಿಯಪ್ಪ ಇತಿಹಾಸಕ್ಕೆ ಸಾಕ್ಷಿ ಆಧಾರ ಸಹಿತ ಕೃತಿ ಬರೆದ ನಂಜುಂಡಸ್ವಾಮಿ ಸಮ್ಮೇಳನಕ್ಕೆ ಅರ್ಥ ತಂದಿದ್ದಾರೆ. ಗುಬ್ಬಿಯ ಮಹನೀಯರಲ್ಲಿ ಗುಬ್ಬಿ ವೀರಣ್ಣ ಸಾಲುಮರದ ತಿಮ್ಮಕ್ಕ,ನಿಟ್ಟೂರು ಶ್ರೀನಿವಾಸರಾವ್, ಹೊಸಕೆರೆ ಚಿದಂಬರಯ್ಯ, ಹಾಗಲವಾಡಿ ಜುಂಜಪ್ಪ, ಚಿ.ಉದಯಶಂಕರ್, ಗಂಗಾಧರಯ್ಯ, ಹೀಗೆ ಅನೇಕರನ್ನು ಸ್ಮರಿಸುವ ಕರ್ತವ್ಯ ಎಲ್ಲರ ಮೇಲಿದೆ ಎಂದರು.
ಧ್ವಜ ಹಸ್ತಾಂತರ ಮಾಡಿದ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಚಿಕ್ಕಣ್ಣ ಯಣ್ಣೆಕಟ್ಟೆ ಮಾತನಾಡಿ ಆರು ಸಮ್ಮೇಳನ ತಾಲ್ಲೂಕಿನ ಸಾಹಿತ್ಯಕ್ಕೆ ಸಾಕ್ಷಿಯಾಗಿದೆ. ನಮ್ಮ ಮೂಲ ನೆಲೆಯ ಪರಂಪರೆ ಬಿಂಬಿಸುವ ಸಾಹಿತ್ಯ ಜನಪದ ಸೊಗಡಿನಲ್ಲಿದೆ. ಜುಂಜಪ್ಪನ ಕಾವ್ಯ ಎಂದಿಗೂ ಕಾಡುಗೊಲ್ಲರ ಪರಂಪರೆ ತೋರುತ್ತದೆ. ಜೊತೆಗೆ ಶಕ್ತಿ ದೇವತೆಗಳ ಆರಾಧನೆ ನಮ್ಮಲ್ಲಿ ಹೆಚ್ಚು ನಡೆಯುತ್ತದೆ. ಮಣ್ಣಮ್ಮ, ಗ್ರಾಮದೇವತೆ, ಆಲದ ಕೊಂಬೆಯಮ್ಮ, ಕೊಲ್ಲಾಪುರದಮ್ಮ, ದಂಡಿನ ಮಾರಮ್ಮ ಹೀಗೆ ಅನೇಕ ಇತಿಹಾಸ ನಮ್ಮಲ್ಲಿ ಪರಿಶಿಷ್ಟ ವಲಯದಿಂದ ಉಳಿದುಬಂದಿದೆ. ಕಲ್ಲೂರು ನಾಗರಾಜಪ್ಪ, ಎಸ್.ನಾಗಪ್ಪ ಮೊದಲಾದವರನ್ನು ಈ ಸಮಯ ಸ್ಮರಿಸಬೇಕಿದೆ. ಸಮ್ಮೇಳನ ಹೆಚ್ಚು ನಡೆದು ಯುವ ಸಾಹಿತಿಗಳಿಗೆ ವೇದಿಕೆ ರೂಪಿಸಲಿ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ ಮಾತನಾಡಿ, ವಿಶೇಷವಾಗಿ ವಿದ್ಯಾರ್ಥಿಗಳು ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚು ಭಾಗವಹಿಸಬೇಕು ಎಂಬುದು ಕನ್ನಡ ಸಾಹಿತ್ಯ ಪರಿಷತ್ ಆಶಯ. ಒಂಬತ್ತನೇ ತರಗತಿ ಮುಂದುವರೆದ ಮಕ್ಕಳಿಗೆ ಸಾಹಿತ್ಯದ ಸವಿಯನ್ನು ಅಥವಾ ಆಸಕ್ತಿಯನ್ನು ಬೆಳೆಸಿದರೆ ಮುಂದಿನ ಪೀಳಿಗೆಯಲ್ಲಿ ಸಾಹಿತ್ಯ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವೇದಿಕೆಯ ಕಾರ್ಯಕ್ರಮಕ್ಕೆ ಮುನ್ನ ಬೆಳಿಗ್ಗೆ ಧ್ವಜಾರೋಹಣ ನಂತರ ಕನ್ನಡಾಂಬೆಯ ಭಾವಚಿತ್ರ ಹಾಗೂ ಸಮ್ಮೇಳಾಧ್ಯಕ್ಷರ ಭವ್ಯ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಲಾ ತಂಡದೊಂದಿಗೆ ನಡೆಯಿತು.
ಇದೇ ಸಂದರ್ಭದಲ್ಲಿ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಬಿಡುಗಡೆ ಗೊಳಿಸಿದರು.
ಯುವ ಸಾಹಿತಿಗಳಾದ ಅರುಣ್ ಕುಮಾರ್ ಅವರ ಸ್ಫೂರ್ತಿ ಕವನ ಸಂಕಲನ, ಗೀತಾ ಕಲ್ಲೂರು ಅವರ ಭಾವ ಸಿಂಚನ ಹಾಗೂ ಅಂಜನ್ ಕುಮಾರ್ ಅವರ ಕಾಲ್ಗೆಜ್ಜೆ ಪುಸ್ತಕವನ್ನು ಉಪನ್ಯಾಸಕ ಡಾ.ಗೋವಿಂದರಾಜು ಎಂ.ಕಲ್ಲೂರು ಬಿಡುಗಡೆ ಗೊಳಿಸಿದರು.
ಸಮ್ಮೇಳನ ಅಧ್ಯಕ್ಷರನ್ನು ಬೆಳ್ಳಿ ರಥದಲ್ಲಿ ಕೂರಿಸಿ, ವಿವಿಧ ಜಾನಪದ ಕಲಾ ತಂಡಗಳಾದ ಡೊಳ್ಳುಕುಣಿತ, ನಂದಿ ಧ್ವಜ, ವೀರಗಾಸೆ ಲಿಂಗದವಿರರ ಕುಣಿತ, ಕುಂಭ ಕಹಳೆ, ಕೋಲಾಟ ಗೊರವನು ಕುಣಿತ, ಅರೆ ವಾದ್ಯ, ಚಿಟ್ಟಿಮೇಳ, ಸೋಮನ ಕುಣಿತದೊಂದಿಗೆ ಗೋಸಲ ಚನ್ನಬಸವೇಶ್ವರ ಸ್ವಾಮಿಯಿಂದ ಜೂನಿಯರ್ ಕಾಲೇಜು ಮೈದಾನದವರೆಗೆ ಮೆರವಣಿಗೆ ಮಾಡಲಾಯಿತು .

ಸಮ್ಮೇಳನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಎಚ್.ಕೆ.ನರಸಿಂಹಮೂರ್ತಿ, ಅಧ್ಯಕ್ಷ ಹೆಚ್.ಸಿ.ಯತೀಶ್, ತಹಸೀಲ್ದಾರ್ ಬಿ.ಆರತಿ, ಸಿಪಿಐ ರಾಘವೇಂದ್ರ, ಶಿಕ್ಷಣಾಧಿಕಾರಿ ಎಂ.ಎಸ್.ನಟರಾಜು,, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ತಾಲ್ಲೂಕು ಪಂಚಾಯತಿ ಇಒ ಜೆ.ಬಿ.ರಂಗನಾಥ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ, ಲೇಖಕರಾದ ಗುಬ್ಬಚ್ಚಿ ಸತೀಶ್, ನಿಕಟ ಪೂರ್ವ ಕಸಾಪ ಅಧ್ಯಕ್ಷ ಶಾಂತರಾಜು, ಜಿಲ್ಲಾ ಜಾಗೃತಿ ಸಮಿತಿ ಡಾ. ಮೂರ್ತಿ ತಿಮ್ಮನಹಳ್ಳಿ, ಮುಖಂಡರಾದ ಕಳ್ಳಿಪಾಳ್ಯ ಲೋಕೇಶ್, ಬಿ.ಎಸ್.ನಾಗರಾಜು, ಜಿಪಂ ಮಾಜಿ ಸದಸ್ಯ ಜಿ.ಹೆಚ್.ಜಗನ್ನಾಥ್, ಬೆಣಚಿಗೆರೆ ರುದ್ರೇಶ್, ಅಪ್ಪಾಜಿ. ಸಿ.ಆರ್.ಶಂಕರ್ ಕುಮಾರ್, ಚೇಳೂರು ಶಿವನಂಜಯ್ಯ, ಡಾ.ಜಿ.ಬಿ.ಮಲ್ಲಪ್ಪ, ರಾಜೇಶ್ ಗುಬ್ಬಿ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷೆ ಆಯಿಷಾ ತಾಸೀನ್, ಹಾಗೂ ಸದಸ್ಯರುಗಳು, ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು, ಮತ್ತಿತರರು ಇದ್ದರು.





