ತುಮಕೂರು : ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಮತ್ತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಇಂದು 77ನೇ ಗಣರಾಜ್ಯೋತ್ಸವ ದಿನಾಚರಣೆ ಮತ್ತು ಕ್ರಾಂತಿವೀರ ಸಂಗೊಳ್ಳಿರಾಯಣ್ಣರವರ ಪುಣ್ಯಸ್ಮರಣೆಯನ್ನು ನಗರದ ಬಿಜಿಎಸ್ ವೃತ್ತದ ಪಾಲಿಕೆ ಆವರಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಯ ಮುಂದೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಮತ್ತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ ಭಾರತ ಇಂದು ಗಣರಾಜ್ಯ ಎಂದು ಕರೆಸಿಕೊಂಡಿದ್ದರೂ ಸಹ ಸಂಪೂರ್ಣವಾಗಿ ಗಣರಾಜ್ಯವಾಗಿಲ್ಲ, ಏಕೆಂದರೆ ಸಂವಿಧಾನ ಜಾರಿಗೆ ಬಂದು ಏಳು ದಶಕಗಳಾದರೂ, ಸಮಾಜದೊಳಗಿನ ಮನಸ್ಸುಗಳು ಇನ್ನೂ ಜಾತಿ, ಧರ್ಮ ಮತ್ತು ಅಂಧಶ್ರದ್ಧೆಗಳ ಬಂಧನದಲ್ಲೇ ಉಳಿದಿವೆ ಎಂದರು, ಭಾರತದ ಇತಿಹಾಸವನ್ನು ಆಳವಾಗಿ ನೋಡಿದರೆ, ಇಲ್ಲಿ ಎರಡು ಸ್ಪಷ್ಟ ದಾರಿಗಳು ಕಂಡುಬರುತ್ತವೆ. ಒಂದು ಮಾನವನನ್ನು ಜಾತಿ, ವರ್ಣ, ಲಿಂಗ ಮತ್ತು ಧರ್ಮದ ಆಧಾರದ ಮೇಲೆ ಬಂಧಿಸುವ ದಮನಕಾರಿ ದಾರಿ. ಇನ್ನೊಂದು ಮನುಷ್ಯನನ್ನು ಮನುಷ್ಯನನ್ನಾಗಿಯೇ ನೋಡುವ, ಪ್ರಶ್ನಿಸುವ ಹಕ್ಕನ್ನು ನೀಡುವ, ಸ್ವಾತಂತ್ರ÷್ಯವನ್ನು ಕೇಂದ್ರವಾಗಿಟ್ಟುಕೊಂಡ ವಿಮೋಚನಾ ದಾರಿ. ಈ ವಿಮೋಚನಾ ದಾರಿಯಲ್ಲಿ ಬುದ್ಧ, ಬಸವಣ್ಣ, ಜ್ಯೋತಿಬಾ ಫುಲೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳ ಮೂಲವಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಇದೇ ದಿನದಂದು ನಮ್ಮ ಕನ್ನಡ ನಾಡಿನ ವೀರ ಯೋಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರು ಸಹ ನಮ್ಮ ನಾಡಿಗಾಗಿ ಬಲಿದಾನವಾದ ದಿನವಾಗಿದೆ, ಸಂಗೊಳ್ಳಿ ರಾಯಣ್ಣರವರು ಮಹಾನ್ ಕ್ರಾಂತಿಕಾರಿ ಯೋಧರಾಗಿದ್ದಂತಹ ವ್ಯಕ್ತಿ ಬ್ರಿಟೀಷರು ನಮ್ಮ ನಾಡಿನ ಜನರನ್ನು ಒತ್ತೆಯಾಳನ್ನಾಗಿಸಿಕೊಳ್ಳಲು ಮುಂದಾದಂತಹ ಸಂದರ್ಭದಲ್ಲಿ ಅವರ ವಿರುದ್ಧ ಹೋರಾಟ ಮಾಡಿ ತಮ್ಮ ಪ್ರಾಣವನ್ನು ಈ ಮಣ್ಣಿಗೆ ಅರ್ಪಿಸಿದಂತಹ ಯೋಧರಾಗಿದ್ದವರು ಎಂದು ಅವರ ಕಾರ್ಯಗಳನ್ನು ಶ್ಲಾಘಿಸಿ ನೆನೆದರು.

ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರವಿಕುಮಾರ್ ಎನ್ ಮಾತನಾಡುತ್ತಾ ಸಂಪೂರ್ಣ ಗಣರಾಜ್ಯ ಎಂದರೆ ಕೇವಲ ಚುನಾವಣೆಗಳಲ್ಲ ಅಥವಾ ಸರ್ಕಾರಗಳ ಬದಲಾವಣೆಯೂ ಅಲ್ಲ. ಪ್ರತಿಯೊಬ್ಬ ನಾಗರಿಕನ ಮನಸ್ಸಿನಲ್ಲಿ ಸಮಾನತೆಯ ಅರಿವು ಬೆಳೆದಾಗ ಮಾತ್ರ ಸಂಪೂರ್ಣ ಗಣರಾಜ್ಯವಾಗುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ, ಸಂವಿಧಾನವನ್ನು ಉಳಿಸಬೇಕಾದರೆ ಮೊದಲು ಅದನ್ನು ಒಪ್ಪುವ ಮನಸ್ಸುಗಳನ್ನು ರೂಪಿಸಬೇಕು. ಅಂದಿನ ಸಂಸತ್ತಿನಲ್ಲಿ ಬಾಬಾ ಸಾಹೇಬರು ರಚಿಸಿರುವ ಸಂವಿಧಾನವನ್ನು ಒಪ್ಪಿ ಅದನ್ನು ಅಳವಡಿಸಿಕೊಂಡರೇ ವಿನಃ ತದನಂತರ ನಮ್ಮ ಜನಪ್ರತಿನಿಧಿಗಳು ಕಾಲಕಾಲಕ್ಕೆ ಅದರಲ್ಲಿ ಬಹಳಷ್ಟು ತಿದ್ದುಪಡಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ, ಇಂತಹ ಕಾರ್ಯಗಳು ಮುಂದೆ ಆಗದಂತೆ ಸಂವಿಧಾನಿಕ ಬದ್ಧವಾದ ಗಣತಂತ್ರವು ನಮಗೆ ಸಿಗಬೇಕಿದೆ, ಆದರೂ ನಮ್ಮ ಭಾರತದ ಸಂವಿಧಾನ ಮತ್ತು ಅದಕ್ಕಿರುವ ಶಕ್ತಿಯನ್ನು ಈಡೀ ವಿಶ್ವವವೇ ಕೊಂಡಾಡುತ್ತಿದೆ ಎಂದರು.

ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ್ ರವರು ಮಾತನಾಡುತ್ತಾ ಇಂದು ಯುವಜನತೆ ವಿವಿಧ ಸಿದ್ಧಾಂತಗಳ ಬಲೆಗೆ ಬೀಳುತ್ತಿರುವುದು ಅಪಾಯಕಾರಿ ಬೆಳವಣಿಗೆ. ಭಾವನಾತ್ಮಕ ಘೋಷಣೆಗಳು, ಧರ್ಮದ ಹೆಸರಿನಲ್ಲಿ ದ್ವೇಷ ಕಾರುವುದು, ಸುಳ್ಳು ರಾಷ್ಟçಭಕ್ತಿ ಇವೆಲ್ಲವೂ ಯುವ ಮನಸ್ಸನ್ನು ಸಂವಿಧಾನದಿಂದ ದೂರ ಕರೆದೊಯ್ಯುತ್ತಿವೆ. ಹೀಗಿರುವಾಗ ಈ ದೇಶವನ್ನು ಸಂಪೂರ್ಣ ಗಣರಾಜ್ಯವನ್ನಾಗಿಸಲು ನಾವು ಯಾವ ಸಿದ್ಧಾಂತವನ್ನು ರೂಢಿಸಿಕೊಳ್ಳಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ ಆದ್ದರಿಂದ ನಮ್ಮ ಉದ್ದೇಶ ಸ್ಪಷ್ಟವಾಗಿರಬೇಕು ಜೊತೆಗೆ ನಮ್ಮ ಉದ್ದೇಶಕ್ಕೆ ಬದ್ಧರಾಗಿರಬೇಕು ಆಗಷ್ಟೇ ನಿಜವಾದ ಗಣತಂತ್ರ÷್ಯವನ್ನು ನಾವು ನೋಡಬಹುದಾಗಿದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಮತ್ತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್, ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ್ ಎಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರವಿಕುಮಾರ್ ಎನ್, ಗೌರವಧ್ಯಕ್ಷರಾದ ಗೂಳೂರು ರಾಜಣ್ಣ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಟೈಲರ್ ಜಗದೀಶ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಇಲಾಸ್ ಅಹಮ್ಮದ್, ಮುಖಂಡರುಗಳಾದ ತ್ಯಾಗರಾಜು ಕೆ, ಮೋಯಿನ್ ಅಹಮ್ಮದ್, ನಿರಂಜನ್, ನಟರಾಜು, ಟಿ.ಎನ್.ನರಸಿಂಹಮೂರ್ತಿ, ಮಂಜುನಾಥ್, ಬಕಾಶ್ ಮಹಮ್ಮದ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here