ತುಮಕೂರು : ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಠ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ರಿ) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹಾಸ್ಟಲ್ ಮತ್ತು ವಸತಿ ನಿಲಯಗಳಲ್ಲಿ ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಡಿ.ಇ.ಓ., ಅಡಿಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರು, ಸ್ವಚ್ಛತಾಗಾರರು, ಸ್ಟಾಫ್ ನರ್ಸ್ ಇವರುಗಳು ಸುಮಾರು 20 ವರ್ಷಗಳಿಂದಲೂ ಕೇವಲ 500 ರೂಪಾಯಿಗಳ ಹೊರಗುತ್ತಿಗೆ ನೌಕರರಾಗಿ ಯಾವುದೇ ಸೇವಾ ಭದ್ರತೆಯಿಲ್ಲದೆ ಗುತ್ತಿಗೆದಾರರ ಶೋಷಣೆಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ರವಿಕುಮಾರ್ರವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿದ ನಂತರ ಜಿಲ್ಲಾಧ್ಯಕ್ಷರು ಮಾತನಾಡಿ ಹಾಸ್ಟಲ್ ಮತ್ತು ವಸತಿ ನಿಲಯಗಳಲ್ಲಿ ಕೆಲಸ ಮಾಡುತ್ತಿರುವ ಇವರುಗಳಿಗೆ ಕನಿಷ್ಠ ವೇತನ ಸಹ ಇಲ್ಲ, ಈಗಿನ ಬೆಲೆ ಏರಿಕೆಯಲ್ಲಿ ಕೇವಲ 11 ರಿಂದ 13 ಸಾವಿರಕ್ಕೆ ಪ್ರತಿನಿತ್ಯ 12 ರಿಂದ 14 ಗಂಟೆಗಳ ಕಾಲ ಕೆಲಸ ನಿರ್ವಹಿಸುವ ಪರಿಸ್ಥಿತಿಯಲ್ಲಿದ್ದೇವೆ, ಆದರೆ ಸರ್ಕಾರದಿಂದ ಒಬ್ಬ ಅಡಿಗೆಯವರ ಹೆಸರಿನಲ್ಲಿ ಗುತ್ತಿಗೆದಾರರಿಗೆ 18700 ರೂಪಾಯಿಗಳವರೆಗೆ ಹಣವನ್ನು ಸಂದಾಯ ಮಾಡುತ್ತಿದ್ದಾರೆ, ಅದರಲ್ಲೂ ವಸತಿ ಶಾಲೆಗಳಲ್ಲಿ ಪ್ರತಿನಿತ್ಯ ಚಪಾತಿ ಅಡುಗೆ ಮಾಡಿ ಬಡಸುವುದರಿಂದ ಬಿಡುವು ಸಿಗದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ, ಇವೆಲ್ಲದರ ಮಧ್ಯೆ ಕಳೆದ ಏಪ್ರಿಲ್ 11, 2025 ರಲ್ಲಿ ರಾಜ್ಯ ಸರ್ಕಾರವು ಕಾರ್ಮಿಕ ಇಲಾಖೆಯಡಿಯಲ್ಲಿ ಕನಿಷ್ಠ ವೇತನ ಪರಿಷ್ಕರಣೆ ಮಾಡಿ ರೂ.25714ನಿಗಧಿ ಮಾಡಲಾಗಿರುತ್ತದೆ, ಆದರೆ ಅದು ಇದುವರೆವಿಗೂ ಜಾರಿಯಾಗದೇ ಇರುವುದು ಶೋಚನೀಯ ಸಂಗತಿ ಅಲ್ಲದೇ ಬೀದರ್ ಮಾದರಿ ಸೊಸೈಟಿ ನಿರ್ಮಿಸಿ ಕೊಡುವುದರಲ್ಲೂ ವಿಳಂಭ ಮಾಡಲಾಗಿದೆ, ಆದ ಪ್ರಯುಕ್ತ ಸರ್ಕಾರವು ಬಡ ನೌಕರರ ಮೇಲೆ ಅನುಕಂಪ ತೋರಿ ನಮ್ಮ ಪ್ರಮುಖ ಬೇಡಿಕೆಗಳಾದ ಹಾಸ್ಟಲ್ ಹೊರಗುತ್ತಿಗೆ ಸಿಬ್ಬಂದಿಗಳನ್ನು ಖಾಯಂ ಮಾಡುವುದು, ನಿವೃತ್ತಿ ಆಗುವವರೆವಿಗೂ ಎಲ್ಲಾ ಹಾಸ್ಟಲ್ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಸೇವಾ ಭದ್ರತೆ ನೀಡುವುದು, 10 ವರ್ಷ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದ ಅಡಿಯಲ್ಲಿ ಎಲ್ಲರನ್ನೂ ತರುವುದು, ಮಾಸಿಕ ವೇತನ ಕನಿಷ್ಠ 36 ಸಾವಿರ ನೀಡುವುದು, ಕೆಲಸ ನಿರ್ವಹಿಸುವ ಅವಧಿಯನ್ನು 8 ಗಂಟೆಗಳಿಗೆ ಸೀಮಿತ ಮಾಡುವುದು ಹಾಗೂ ಕಳೆದ ಏಪ್ರಿಲ್ನಲ್ಲಿ ಮಾಡಿರುವ ಪರಿಷ್ಕರಣೆಯನ್ನು ಜಾರಿಗೆ ತರುವುದು ನಮ್ಮ ಪ್ರಮುಖ ಬೇಡಿಕೆಗಳಾಗಿದ್ದು ನಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ನಮ್ಮ ಮನವಿ ಪತ್ರದಲ್ಲಿ ಉಲ್ಲೇಖ ಮಾಡಿದ್ದೇವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹನುಮೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಎಸ್.ಎನ್, ಸೇರಿದಂತೆ ಹಾಸ್ಟಲ್ ಮತ್ತು ವಸತಿ ನಿಲಯಗಳ ನೌಕರರು ಉಪಸ್ಥಿತರಿದ್ದರು