
ಗುಬ್ಬಿ : ಇಂದಿನ ಮಕ್ಕಳಿಗೆ ಹಳ್ಳಿಯ ನೆನೆಪು ಅಲ್ಲಿನ ಹಬ್ಬ ಹರಿದಿನ, ನಮ್ಮ ಸಂಸ್ಕೃತಿ ಸಂಸ್ಕಾರ ಸಂಪ್ರದಾಯಗಳು ಎಲ್ಲವೂ ಮೊಬೈಲ್, ಟಿವಿ ಹಾಗೂ ಐಟಿ-ಬಿ,ಟಿ ಜಗತ್ತಿಗೆ ಮಾರುಹೋಗುತ್ತಿರುವ ಮಕ್ಕಳಿಗೆ ಹಳ್ಳಿಯ ಸೊಗಡನ್ನು ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ಸಿಎಸ್ ಪುರ ಹೋಬಳಿ ಹುಲ್ಲೆಕೆರೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿನಕಾಲದ ಸಂಪ್ರದಾಯಗಳು ಇತ್ತೀಚೆಗೆ ಕಣ್ಮರೆಯಾಗುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಕಿ ಇಂದಿನ ಮಕ್ಕಳಿಗೆ ಹಬ್ಬದ ಆಚರಣೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು. ಇಂತಹ ವಿಶೇಷ ಕಾರ್ಯಕ್ರಮವನ್ನು ಮಾಡುವುದರಿಂದ ಆ ಮಕ್ಕಳಲ್ಲಿ ಹೊಸತನ ಹಾಗೂ ಯಾವ ಹಬ್ಬಕ್ಕೆ ಯಾವ ಶ್ರೇಷ್ಠತೆ ಇದೆ ಎಂಬುದರ ಬಗ್ಗೆ ತಿಳಿಯುವುದಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಹಾಗಾಗಿ ಇಂತಹ ಕಾರ್ಯಕ್ರಮವನ್ನು ಅಂಗನವಾಡಿಯಲ್ಲಿ ಮಾಡಿದ್ದಾರೆ ಎಂದು ತಿಳಿಸಿದರು.
ಸಂಕ್ರಾಂತಿ ಹಬ್ಬದ ಹಿನ್ನಲೆಯಲ್ಲಿ ಅಂಗನವಾಡಿ ಯಲ್ಲಿ ಹಳ್ಳಿಗಳಲ್ಲಿ ಬಳಸುತ್ತಿದ್ದಂತಹ ವಸ್ತುಗಳನ್ನು ಇಟ್ಟು ಆ ಮಕ್ಕಳಿಗೆ ಅದರ ಮಾಹಿತಿ ಸಂಕ್ರಾಂತಿ ಹಬ್ಬದ ವಿಶೇಷತೆಯ ಬಗ್ಗೆ ಇಲ್ಲಿನ ಶಿಕ್ಷಕಿ ಜಾನಕಮ್ಮ ಬಹಳ ವಿಶೇಷವಾಗಿ ತಿಳಿಸಿಕೊಟ್ಟಿದ್ದಾರೆ.

ಒಂಬತ್ತು ತರಹದ ನವಧಾನ್ಯಗಳು, ಮಡಿಕೆ, ಕುಡಿಕೆ, ನೇಗಿಲು, ಎತ್ತಿನ ಗಾಡಿ ರಾಗಿಯ ರಾಶಿ, ಅಡಿಕೆಯ ಹೊಂಬಾಳೆ, ರಾಗಿ ಬೀಸುವ ಕಲ್ಲು ಒನಕೆ, ಹಳ್ಳಿಯ ಮನೆ ರಾಗಿ ಪೈರು, ಬಿದಿರಿನ ಮರ ಹೀಗೆ ಹಲವು ವಸ್ತುಗಳನ್ನು ಇಟ್ಟು ಸಂಕ್ರಾಂತಿಯ ಹಬ್ಬದಲ್ಲಿ ರೈತರು ತಾವು ಬೆಳೆದಂತಹ ಬೆಳೆಗಳಿಗೆ ಯಾವ ರೀತಿ ಪೂಜೆಯನ್ನು ಸಲ್ಲಿಸುತ್ತಾರೆ ಎಂಬುದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪುಟ್ಟ ಪುಟ್ಟ ಮಕ್ಕಳಿಗೆ ತಿಳಿಸಿದ್ದಾರೆ.
ಅಂಗನವಾಡಿ ಮೇಲ್ವಿಚಾರಕಿ ಸ್ವರ್ಣ ಮಾತನಾಡಿ ನಮ್ಮ ಹಳ್ಳಿಯ ಜೀವನ ಇಂದಿನ ಮಕ್ಕಳಿಗೆ ಗೊತ್ತೇ ಇಲ್ಲ ಹಾಗಾಗಿ ಪ್ರತಿಯೊಂದು ಹಬ್ಬವನ್ನು ಸಹ ನಾವು ಅಂಗನವಾಡಿಯಲ್ಲಿ ಬಹಳ ವಿಶೇಷವಾಗಿ ಮಾಡುತ್ತೇವೆ. ಮಕ್ಕಳಿಗೆ ಅದರ ಬಗ್ಗೆ ಮಾಹಿತಿಯನ್ನು ನೀಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿ ಓ ಸುಜಾತ, ಅಂಗನವಾಡಿ ಸಹಾಯಕಿ ಶ್ರೀದೇವಿ ಮತ್ತು ಮಕ್ಕಳು, ಪೋಷಕರುಸೇರಿದಂತೆ ಇನ್ನಿತರರು ಹಾಜರಿದ್ದರು.






