ಗುಬ್ಬಿ: ವೀರಭದ್ರಸ್ವಾಮಿ ದೇವಸ್ಥಾನ ಅತ್ಯಂತ ಮಹಿಮೆ ಹೊಂದಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸು ತ್ತಾರೆ. ಸಾವಿರಾರು ಮಂದಿಗೆ ಇಲ್ಲಿನ ದೇವರ ಹರಕೆ ಯಿಂದ ಒಳ್ಳೆಯದಾಗಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡರು ತಿಳಿಸಿದರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಅಂಕಳಕೊಪ್ಪ ಮಜರೆ ವೀರಣ್ಣನಗುಡಿ ಇತಿಹಾಸ ಪ್ರಸಿದ್ಧ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿಯ ಲಕ್ಷ ದೀಪೋತ್ಸವ ಮತ್ತು ಬೆಳ್ಳಿ ಪಲ್ಲಕಿ ಉತ್ಸವಕ್ಕೆ ಸೋಮವಾರ ಸಂಜೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಚಾಲನೆ ನೀಡಿ ಮಾತನಾಡಿ,
ಮಾಜಿ ಶಾಸಕ ವೀರನಗೌಡರು ಈ ದೇವಸ್ಥಾನದ ಜೀರ್ಣೋದ್ಧಾರ ಮಾಡಿ ದೇವಸ್ಥಾನಕ್ಕೆ ಲಕ್ಷಾಂತರ ಜನರು ಬಂದು ತಮ್ಮ ನಂಬಿಕೆಯಂತೆ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ. ನಾನು ಸಹ ಶಾಸಕನಾಗುವಾಗ ಮೊದಲ ಬಾರಿಗೆ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಹೋಗಿದ್ದೇನೆ ಎಂದು ಹೇಳಿದರು.
ಉತ್ಸವ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎ.ಎಸ್.ಮಸಾಲೆ ಜಯರಾಮ್ ಮಾತನಾಡಿ, ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಪ್ರಸಿದ್ಧ ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕಾರ್ತಿಕ ಮಾಸದಲ್ಲಿ ಲಕ್ಷದೀಪೋತ್ಸವವನ್ನು ನಡೆಸುತ್ತಾ ಬಂದಿದ್ದೇವೆ. ಅದೇ ರೀತಿ ನಾಡಿನ ಸಮಸ್ತ ಜನತೆಗೆ ಶ್ರೀ ವೀರಭದ್ರಸ್ವಾಮಿಯು ಸಕಲ ಐಶ್ವರ್ಯ, ಆರೋಗ್ಯ ಕೊಟ್ಟು ಕಾಪಾಡಲಿ. ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಿ ರೈತರು ಸಮೃದ್ಧಿಯಾಗಿ ಬದುಕಲಿ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರ ಕೋರಿಕೆಗಳು, ಇಷ್ಟಾರ್ಥಗಳು ಶೀಘ್ರವಾಗಿ ನೆರವೇರುತ್ತವೆ ಎಂಬ ನಂಬಿಕೆ ಇರುವುದರಿಂದ ನಾನು ಸಹ ಎಲ್ಲೇ ಇದ್ದರು ಪ್ರತಿ ವರ್ಷ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಭಾಗವಹಿಸಿ ದೇವರ ಆಶೀರ್ವಾದ ಪಡೆಯುತ್ತೇನೆ ಎಂದು ತಿಳಿಸಿದರು.
ದೇವಸ್ಥಾನ ಸಮಿತಿ ಕಾರ್ಯಾಧ್ಯಕ್ಷ ಎಂ.ವಿ.ಬಸವರಾಜ್ ಮಾತನಾಡಿ, ಈ ದಿನ ವಿಶೇಷವಾಗಿ ಮಾಜಿ ಶಾಸಕ ದಿವಂಗತ ವೀರಣ್ಣಗೌಡರ ಜ್ಞಾಪಕಾರ್ಥವಾಗಿ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಈ ದೇವಾಲಯಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಈ ಸ್ಥಳಕ್ಕೆ ಬಂದ ಭಕ್ತಾಧಿಗಳಿಗೆ ಯಾವುದೇ ಕಷ್ಟ ಇದ್ದರೂ ಕೂಡಲೇ ಪರಿಹಾರ ಸಿಗುವುದರಲ್ಲಿ ಸಂಶಯವಿಲ್ಲ. ದೇವಸ್ಥಾನದ ಅಭಿವೃದ್ಧಿ ಹಾಗೂ ಸಮುದಾಯ ಭವನ ಹಾಗೂ ವಸತಿ ಸೌಕರ್ಯಕ್ಕೆ ನಿತ್ಯದಾಸೋಹಕ್ಕೆ ಮಾಜಿ ಶಾಸಕರಾದ ಮಸಾಲ ಜಯರಾಮ್ ಅವರು ಹಾಗೂ ಭಕ್ತರು ಸಹಕಾರ ನೀಡುತ್ತ ಬಂದಿದ್ದಾರೆ ಎಂದರು.

ವಿಶೇಷ ಪೂಜೆ, ಅಲಂಕಾರ: ಕಾರ್ತಿಕ ಮಾಸದ ಕೊನೆಯ ಸೋಮವಾರ ದೇವಾಲಯದಲ್ಲಿ ಗಣಪತಿ ಪ್ರಾರ್ಥನೆ, ಗಂಗಾಪೂಜೆ, ಗಣಪತಿ ಪೂಜೆ, ಮಹಾಸಂಕಲ್ಪ, ಪುಣ್ಯಾಹವಾಚನ, ಪಂಚಗವ್ಯ, ಮೂಲದೇವರ ಅನುಜ್ಞೆ, ಕವನಸ್ಥಾಪನೆ, ವೇದಿಕಾರ್ಜಿನೆ, ಗಣಪತಿ ಹೋಮ, ನವಗ್ರಹ, ಮೃತ್ಯುಂಜಯ ಹೋಮ, ದುರ್ಗಾಹೋಮ, ನಕ್ಷತ್ರ ಹೋಮ, ರುದ್ರಹೋಮ ನಡೆಯುತ್ತದೆ. ನಂತರ
ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ಸ್ವಾಮಿಯವರಿಗೆ ಮೂಲಮಂತ್ರ ಹೋಮ, ಪೂರ್ಣಾಹುತಿ, ವಸೋರ್ಧಾರ ಮಹಾಪೂರ್ಣಾಹುತಿ, ಯಾತ್ರಾದಾನ ಪೂರ್ವಕ ಕಳಶ ವಿಸರ್ಜನೆ, ದೇವಾಲಯ ಪ್ರದಕ್ಷಿಣಾ ಪೂರ್ವಕ ಮಹಾ ಕುಂಭಾಭಿಷೇಕ ವಿಶೇಷ ಪುಷ್ಪಾಲಂಕಾರಕ್ಕೆ ನಾನಾ ರೀತಿಯ ಹೂಗಳನ್ನು ಬಳಸಲಾಗಿತ್ತು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.

ಲಕ್ಷದೀಪೋತ್ಸವ ಮೆರುಗು: ಲಕ್ಷದೀಪೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಸಂಜೆ ಆಕರ್ಷಕ ಬೆಳ್ಳಿ ಪಲ್ಲಕ್ಕಿ ಉತ್ಸವ ವೈಭವಯುತವಾಗಿ ನಡೆಯಿತು. ವೀರಗಾಸೆ ಕುಣಿತ, ಲಿಂಗದವೀರರ ಕುಣಿತ, ಕರಡಿವಾದ್ಯ, ಸೇರಿದಂತೆ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಬೆಳಿಗ್ಗೆಯಿಂದ ರಾತ್ರಿಯಲ್ಲ ಭಕ್ತರು ಸರದಿಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.

ನಾಟಕ ಪ್ರದರ್ಶನ: ಗ್ರಾಮದ ಸ್ಥಳೀಯರು ಸೇರಿ ರಾತ್ರಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ಶ್ರೀ ವೀರಭದ್ರಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಅಭಿನಯಿಸಿದರು.
ತುರುವೇಕೆರೆ ಶಾಸಕ ಎಂಟಿ.ಕೃಷ್ಣಪ್ಪ, ಶೈಲಜಾ ವಿ.ಸೋಮಣ್ಣ, ಸುನಂದ ಮಸಾಲ ಜಯರಾಮ್ , ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಪುಟ್ಟಸ್ವಾಮಿ, ಕಾರ್ಯದರ್ಶಿ ಟಿ.ಎನ್.ಶಿವರುದ್ರಯ್ಯ, ಮುಖಂಡ ರವಿ, ರಮೇಶ್, ವಿ.ಡಿ.ರಾಮು, ಲೋಕೇಶ್, ದೇವರಾಜ್,ಶಿವಪ್ರಸಾದ್, ಅರ್ಚಕ ಶ್ರೀಧರ್ ದೀಕ್ಷಿತ್, ಗ್ರಾಮದ ಮುಖಂಡರು, ಅಕ್ಕಪಕ್ಕ ಗ್ರಾಮದ ಮುಖಂಡರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾಧಿಗಳು ಭಾಗವಹಿಸಿದ್ದರು.





