
ಗುಬ್ಬಿ : ಬೇಗ ರೋಗ ಪತ್ತೆ ಮಾಡಿಕೊಂಡು ಚಿಕಿತ್ಸೆ ಪಡೆದಲ್ಲಿ ಬೇಗ ಗುಣಮುಖರಾಗಬಹುದು ಎಂದು ತಾಲೂಕು ವೈದ್ಯಾಧಿಕಾರಿ ಡಾ. ಬಿಂದು ಮಾಧವ್ ತಿಳಿಸಿದರು.
ತಾಲ್ಲೂಕಿನ ನಿಟ್ಟೂರು ಬಸ್ ನಿಲ್ದಾಣದಲ್ಲಿ ಆರೋಗ್ಯ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ನಿಟ್ಟೂರು ಇವರುಗಳ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಕ್ಷಯರೋಗ ಮುಕ್ತ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷಯರೋಗಿಗಳು ಕೆಮ್ಮುವಾಗ ಹಾಗೂ ಸೀನುವಾಗ ಬಾಯಿ ಮತ್ತು ಮೂಗಿನ ಹತ್ತಿರ ಕರವಸ್ತ್ರವನ್ನು ಇಟ್ಟುಕೊಳ್ಳಬೇಕು. ರೋಗಿಯು ಕಫವನ್ನು ಕಂಡಕಂಡಲ್ಲಿ ಉಗಿಯಬಾರದು. ನವಜಾತ ಶಿಶುಗಳಿಗೆ ಕಡ್ಡಾಯವಾಗಿ ಬಿಸಿಜಿ ಲಸಿಕೆ ಹಾಕಿಸಬೇಕು. ಕ್ಷಯ ರೋಗಿ ಇರುವ ಮನೆಯಲ್ಲಿ ತುಂಬ ಎಚ್ಚರಿಕೆಯಿಂದ ಇರಬೇಕು. ಮಕ್ಕಳ ಅರೋಗ್ಯದ ಕಡೆ ಜಾಗೃತಿ ವಹಿಸಬೇಕು, ಕ್ಷಯ ರೋಗಿಗಳು ಪ್ರಾಥಮಿಕ ಚಿಕಿತ್ಸೆ ಪಡೆಯುವುದು ಉತ್ತಮವಾದ ಮಾರ್ಗ ಎಂದು ತಿಳಿಸಿದರು.

ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಜಗದೀಶ್ ಅವರು ಕ್ಷಯ ರೋಗ ನಿಯಂತ್ರಣಕ್ಕೆ ಸರಕಾರ ಕೈಗೊಂಡಿರುವ ಯೋಜನೆಗಳನ್ನು ಕುರಿತು ಮಾಹಿತಿ ನೀಡಿ, ಸುಧೀರ್ಘಕಾಲ ಕೆಮ್ಮು ಜ್ವರ ಹಸಿವಾಗದೆ ತೂಕ ಕಡಿಮೆಯಾಗುವುದು ಕ್ಷಯ ರೋಗದ ಲಕ್ಷಣ ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ನಿಟ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ರಾಜಶೇಖರ್ ಮಾತನಾಡಿ, ಹೆಚ್ಚಾಗಿ ಎಲ್ಲರೂ ಕೂಡ ಹಳ್ಳಿಗಳಲ್ಲಿ ಕ್ಷಯ ರೋಗ ನಿಯಂತ್ರಣ ಪ್ರಚಾರ ಮಾಡಬೇಕು. ಕ್ಷಯ ರೋಗ ಮುಕ್ತ ಗ್ರಾಮ ಪಂಚಾಯಿತಿ ಮಾಡುವುದರ ಕಡೆಗೆ ಹೆಚ್ಚು ಗಮನಹರಿಸಬೇಕು. ಕ್ಷಯ ರೋಗ ಜನರ ಆರೋಗ್ಯಕ್ಕೂ, ಸಮಾಜಕ್ಕೂ ಹಾನಿ ಮಾಡುತ್ತದೆ. ಆದ್ದರಿಂದ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ರಮೇಶ್, ನರಸಿಂಹಮೂರ್ತಿ, ಜಯಣ್ಣ, ಬಿಪಿಎಂ ಮಧು, ಲ್ಯಾಬ್ ಟೆಕ್ನಿಷಿಯನ್ ರುದ್ರಮ್ಮ ಹಾಗೂ ಎಲ್ಲಾ ಅರೋಗ್ಯ ಸಿಬ್ಬಂದಿಗಳು, ಅಶಾ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.






