ತುಮಕೂರು: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಹಿರಿಯ ಉಪನ್ಯಾಸಕರುಗಳ ಮೂಲಕ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸುವ ಜಂಟಿ ಸುತ್ತೋಲೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಪದಾಧಿಕಾರಗಳು  ಪಿಯು ಡಿಡಿಪಿಐಗೆ ಮನವಿ ಸಲ್ಲಿಸಿದರು.

ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಗಾವಹಿಸುವ ಉದ್ದೇಶದಿಂದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಉಪನ್ಯಾಸಕರ ಮೂಲಕ ಸ್ಥಳೀಯ ಪರಿಶೀಲನೆ ನಡೆಸುವ ತೀರ್ಮಾನಕ್ಕೆ ಪ್ರಾಂಶುಪಾಲರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

ಈ ಸಂಬಂಧ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿದೇಶಕ ಡಾ.ಬಾಲಗುರುಮೂರ್ತಿಯವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಪ್ರಾಂಶುಪಾಲರ ಸಂಘದ ಅಧ್ಯಕ್ಷ ನೇ.ರಂ.ನಾಗರಾಜು, ವಾಸ್ತವವಾಗಿ ಡಯಟ್‌ನಲ್ಲಿ ಇರುವ ಹುದ್ದೆ ಉಪನ್ಯಾಸಕ ಹುದ್ದೆಯಲ್ಲ, ಅದು ಪ್ರಶಿಕ್ಷಕರ ಹುದ್ದೆ. ಅವರ ಸಾಮಾನ್ಯ ವಿದ್ಯಾರ್ಹತೆ ಬಿಎ, ಬಿಎಸ್‌ಸಿ ಬಿಇಡಿ. ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಡಯಟ್‌ನಲ್ಲಿ ಉಪನ್ಯಾಸ ಮಾಡುವವರನ್ನು ಟೀಚರ್ ಎಜುಕೇಟರ್ ಅಂದರೆ ಪ್ರಶಿಕ್ಷಕ ಎಂದು ಸಂಬೋಧನೆ ಮಾಡಲಾಗುತ್ತದೆ. ಅವರು ವಿಷಯಾಧಾರಿತ ಪಾಠ ಮಾಡುತ್ತಾರೆ ವಿನ: ಅವರಿಗೆ ಪದವಿಪೂರ್ವ ಶಿಕ್ಷಣದ ವಿಷಯಕ್ಕೆ ಸಂಬಂಧಪಟ್ಟಂತೆ ಯಾವುದೇ ಆಳವಾದ ಜ್ಞಾನ ಇರುವುಲ್ಲ ಎಂದರು.

ಪದವಿಪೂರ್ವ ಶಿಕ್ಷಣ ಹಂತವು ಶಾಲಾ ತರಬೇತಿಯ ವಿಸ್ತರಣೆ ಅಲ್ಲ, ಅದು ವೈಜ್ಞಾನಿಕ ಆಧಾರಿತ ಸ್ಪರ್ಧಾತ್ಮಕ ಹಾಗೂ ರಾಷ್ಟಮಟ್ಟದ ಪಠ್ಯಕ್ರಮ. ಡಯಟ್ ಪ್ರಶಿಕ್ಷಕರು ಪ್ರೌಢಶಾಲೆಯಲ್ಲಿ ಸೀನಿಯರ್ ಅಸಿಸ್ಟೆಂಟ್ ಟೀಚರ್ ಹುದ್ದೆಯಿಂದ ಬಡ್ತಿ ಪಡೆದು ಡಯಟ್‌ನ ಪ್ರಶಿಕ್ಷಕರ ಹುದ್ದೆಗೆ ವರ್ಗಾವಣೆಗೊಂಡಿರುತ್ತಾರೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಶಿಕ್ಷಕರಿಗೆ ತರಬೇತಿ ನೀಡುವುದು ಮಾತ್ರ ಅವರ ವ್ಯಾಪ್ತಿಗೆ ಬರುತ್ತದೆ. ಪದವಿಪೂರ್ವ ಶಿಕ್ಷಣದ ಗಣಿತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್, ಗಣಕವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಅವರಿಗೆ ಪರಿಕಲ್ಪನೆ ಇರುವುದಿಲ್ಲ ಎಂದು ಹೇಳಿದರು.

ಈ ಎಲ್ಲಾ ಕಾರಣಗಳಿಂದ ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ ಈ ತಿಂಗಳ 18ರಂದು ಹೊರಡಿಸಿರುವ ಸುತ್ತೋಲೆಯನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ನೇ.ರಂ.ನಾಗರಾಜು ಮನವಿ ಮಾಡಿದರು.

ಈ ವೇಳೆ ಸಂಘದ ಕಾರ್ಯದರ್ಶಿ ಸತೀಶ್ ಸಿ.ಜಿ, ರಾಜ್ಯ ಪ್ರತಿನಿಧಿ ಚಂದ್ರಯ್ಯ, ಪ್ರಾಂಶುಪಾಲರಾದ ಅಕ್ಕಮ್ಮ, ರಾಜ್ಯ ಪದವಿಪೂರ್ವ ಕಾಲೇಜುಗಳ ಕ್ರೀಡಾ ಸಂಘದ ಅಧ್ಯಕ್ಷ ಬಸವರಾಜು ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here