
ಗುಬ್ಬಿ : ಬೇವಿನ ಎಣ್ಣೆಯ ಸಿಂಪರಣೆಯು ಕೃಷಿಯಲ್ಲಿ ನೈಸರ್ಗಿಕ ಕೀಟನಾಶಕವಾಗಿದ್ದು ರಸಹೀರುವ ಕೀಟಗಳು ಮೈಟ್ಸ್ ಮತ್ತು ಶಿಲೀಂದ್ರಗಳನ್ನು ನಿಯಂತ್ರಿಸಿ ಅವುಗಳ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಸಸ್ಯಗಳ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಜಗದೀಶ್ ಪಾಟೀಲ್ ತಿಳಿಸಿದರು.
ತಾಲ್ಲೂಕಿನ ಸಿ ಎಸ್ ಪುರ ಹೋಬಳಿಯ ಸಿ.ಕೊಡಗೇಹಳ್ಳಿ ಗ್ರಾಮದ ಕೃಷ್ಣಪ್ಪ ಅವರ ತೋಟದಲ್ಲಿ ತೆಂಗಿನ ಮರಗಳಿಗೆ ಡ್ರೋಣ್ ಮುಖಾಂತರ ಬೇವಿನ ಎಣ್ಣೆ ಸಿಂಪಡಿಸುವ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇಸಿಗೆ ಹತ್ತಿರ ಬರುತ್ತಿರುವುದರಿಂದ ತೆಂಗಿನ ತೋಟಗಳಲ್ಲಿ ಎಲೆ ತಿನ್ನುವ ಕಪ್ಪು ತಲೆಯ ಹುಳುಗಳ ಕಾಟ ಹೆಚ್ಚಾಗುತ್ತದೆ. ಇದರಿಂದ ತೆಂಗಿನ ತೋಟಗಳಿಗೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೇವಿನ ಎಣ್ಣೆ ಸಿಂಪಡಣೆ ಮಾಡುವುದರಿಂದ ನುಸಿ ರೋಗ ಸೇರಿದಂತೆ ಎಲೆ ತಿನ್ನುವ ಹುಳುಗಳ ಕಾಟವನ್ನು ನಿಯಂತ್ರಣ ಮಾಡಬಹುದು. ಇಂದು ಕೃಷ್ಣಪ್ಪನವರ ತೋಟದಲ್ಲಿ ಡ್ರೋಣ್ ಮುಖಾಂತರ ಹತ್ತು ಸಾವಿರ ಪಿಪಿಎಂ ಬೇವಿನ ಎಣ್ಣೆಯನ್ನು ಸಿಂಪಡಣೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ರೈತರಿಗೆ ಇದು ಪರಿಸರಸ್ನೇಹಿಯಾಗಿದ್ದು ವೆಚ್ಚವು ಕಡಿಮೆಯಾಗುತ್ತದೆ. ಈ ಪ್ರಾತ್ಯಕ್ಷಿಕೆಯ ಫಲಿತಾಂಶವನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಸಿ.ಕೊಡಗೇಹಳ್ಳಿ ಗ್ರಾಮದ ಪ್ರತಿ ರೈತರ ತೋಟಗಳಿಗೂ ಬೇವಿನ ಎಣ್ಣೆ ಸಿಂಪಡಿಸುವ ಕಾರ್ಯ ಯೋಜನೆ ರೂಪಿಸುತ್ತೇವೆ ಎಂದು ತಿಳಿಸಿದರು.
ತೋಟದ ಮಾಲೀಕ ಕೃಷ್ಣಪ್ಪ ಮಾತನಾಡಿ ಕಪ್ಪು ತಲೆಯ ಹುಳುಗಳು ತೆಂಗಿನ ಗರಿಯ ರಸವನ್ನು ಹೀರುವುದರಿಂದ ಇಳುವರಿ ಕುಂಠಿತವಾಗುತ್ತದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಂತೆ ನಮ್ಮ ತೋಟದಲ್ಲಿ ಡ್ರೋನ್ ಮುಖಾಂತರ ಬೇವಿನ ಎಣ್ಣೆಯನ್ನು ಸಿಂಪಡಿಸಿದ್ದೇವೆ.ಎಂದರು.
ರೈತ ಮುಖಂಡ ಕೆಂಪರಾಜು ಮಾತನಾಡಿ, ತೆಂಗಿನ ಮರಗಳು ಎತ್ತರವಾಗಿ ಬೆಳೆಯುವುದರಿಂದ ಡ್ರೋಣ್ ಮೂಲಕ ನೆತ್ತಿಯ ಮೇಲಿಂದ ಬೇವಿನ ಎಣ್ಣೆಯನ್ನು ಸಿಂಪಡಿಸಿದಾಗ ನುಸಿರೋಗ, ವೈಟ್ ಫ್ಲೈ, ಶಿಲೀಂದ್ರಗಳ ಕಾಟಗಳನ್ನು ತಡೆಗಟ್ಟಬಹುದು ಇದು ರೈತರಿಗೆ ಅನುಕೂಲಕಾರಿಯಾಗಿದೆ ಎಂದರು.
ಪ್ರಾತ್ಯಕ್ಷಿಕೆಯಲ್ಲಿ ಐದು ಎಕರೆ ತೆಂಗಿನ ತೋಟಕ್ಕೆ ಹತ್ತು ಸಾವಿರ ಪಿಪಿಎಂ ಬೇವಿನ ಎಣ್ಣೆಯನ್ನು ಸಿಂಪಡಣೆ ಮಾಡಲಾಯಿತು. ಐಡಿಎಫ್ ಗಿರೀಶ್, ನೂರಾರು ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.









