ಮಧುಗಿರಿ : ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮನ್ವಂತರವನ್ನು ಸೃಷ್ಟಿಸಿ, ಸೃಜನಶೀಲ ಕೃತಿಗಳನ್ನು ನೀಡಿದ ಕನ್ನಡದ ಮೊದಲ ಸರಸ್ವತಿ ಸನ್ಮಾನ ಪುರಸ್ಕೃತ ಡಾ. ಎಸ್.ಎಲ್ ಭೈರಪ್ಪನವರು ಕನ್ನಡ ಸಾಹಿತ್ಯದ ಅಗ್ರಗಣ್ಯ ಕಾದಂಬರಿಕಾರರು ಎಂದು ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಸ್.ಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ್ದ “ಎಸ್.ಎಲ್. ಭೈರಪ್ಪನವರಿಗೆ ನುಡಿ ನಮನ” ಕಾರ್ಯಕ್ರಮದಲ್ಲಿ ಮಾತನಾಡಿ, ಬಾಲ್ಯದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದರೂ, ದಿಟ್ಟತನದ ಮೂಲಕ ಸಾಹಿತ್ಯ ಕೃತಿಗಳಲ್ಲಿ ವೈವಿಧ್ಯತೆಯನ್ನು ನೀಡಿದವರು ಎಂದರು.
ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕಿ ಚಂದ್ರಕಲಾ ಮಾತನಾಡಿ, ಭೀಮಕಾಯದಿಂದ ಉತ್ತರಕಾಂಡದವರೆಗೆ ಬರೆದ ಎಲ್ಲಾ ಕೃತಿಗಳು ಆದ್ವಿತೀಯ ಎಂದು ಬಣ್ಣಿಸುತ್ತಾ, ಇತಿಹಾಸದ ವಿದ್ಯಾರ್ಥಿಯು ಸಂಶೋಧಕನಾಗಲು ಹೊರಟ ವಿಭಿನ್ನ ಅನುಭವಗಳು ವಂಶವೃಕ್ಷ ಮತ್ತು ಮಹಾಭಾರತದ ಕಥಾ ವಸ್ತುವಾದ ಪರ್ವ ವಿಶೇಷವಾದದ್ದು, ಅವರಿಗೆ ಜ್ಞಾನಪೀಠ ಪುರಸ್ಕಾರವು ಸಿಗಬೇಕಿತ್ತು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಎಂ ಗೋವಿಂದರಾಯ ಮಾತನಾಡಿ ಭೈರಪ್ಪನವರ ಕೃತಿಗಳು ಭಾರತೀಯ ಅನೇಕ ಭಾಷೆಗಳಿಗೆ ಅನುವಾದಗೊಂಡು, ಪ್ರಕಟಣಾ ಪೂರ್ವದಲ್ಲಿಯೇ ಮುಂಗಡ ಬುಕ್ಕಿಂಗ್ ಮಾಡುವಷ್ಟರ ಮಟ್ಟಿಗೆ ಅವರ ಸೃಜನಶೀಲ ಪ್ರತಿಭೆ ಎಲ್ಲಾ ಕೃತಿಗಳಲ್ಲೂ ಅನಾವರಣಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ವೇದಲಕ್ಷ್ಮೀ, ಡಾ. ಹೆಚ್, ಮಂಜುನಾಥ್ ಬಿ, ಡಾ. ವಿಜಯಲಕ್ಷ್ಮಿ ಎನ್, ಮಂಜುನಾಥ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ ಬಿ ಆರ್ ರಂಜಿತ, ಪ್ರದೀಪ್ ಕುಮಾರ್, ಹರಿಕುಮಾರ್, ಮುಜತಬಾ ಫರ್ಹಿನ್, ಡಾ. ಲತಾ, ಡಾ ದುರ್ಗಪ್ಪ ಉಪಸ್ಥಿತರಿದ್ದು, ಮಂಜುನಾಥ ಪೂಜೇರಿ ನಿರೂಪಿಸಿ, ಮಂಜುನಾಥ್ ಎಸ್ ವಿ ಸ್ವಾಗತಿಸಿದರೆ, ವಿದ್ಯಾರ್ಥಿ ಶಶಿಕುಮಾರ್ ವಂದಿಸಿದರು.