ಗುಬ್ಬಿ: ನಾಯಿ ಕಡಿತಕ್ಕೆ  ನಿರ್ಲಕ್ಷಿಸದೆ ಸಕಾಲಕ್ಕೆ ಚುಚ್ಚುಮದ್ದು ಪಡೆದು ಗುಣಮುಖವಾಗಬೇಕು ಎಂದು ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ್ ತಿಳಿಸಿದರು.

ಪಟ್ಟಣ ಪಶು ಆರೋಗ್ಯ ಇಲಾಖೆಯಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಪಟ್ಟಣದ ಪಂಚಾಯತಿ ಹಾಗೂ ಲಯನ್ಸ್ ಕ್ಲಬ್ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ರೇಬಿಸ್ ರೋಗದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಮತ್ತು ಉಚಿತ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ನಾಯಿ ಕಚ್ಚಿದ ತಕ್ಷಣ ಕೆಲವು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ನಂತರ ಚಿಕಿತ್ಸೆ ಪಡೆದರೆ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಶ್ವಾನ ಪ್ರಿಯರು ತಾವು ಸಾಕಿದ ನಾಯಿಗಳಿಗೆ ಚುಚ್ಚುಮದ್ದು ಹಾಕಿಸಿಕೊಂಡಾಗ ಅವುಗಳು ಕಚ್ಚಿದರೂ ಸಹ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. 

ನಾಯಿ, ಬೆಕ್ಕು, ನರಿ, ಹಸು, ಕುರಿ, ಕುದುರೆ, ಮುಂಗುಸಿ ಹಾಗೂ ಇತರ ಕಾಡು ಪ್ರಾಣಿಗಳ ಕಡಿತದಿಂದ ರೇಬಿಸ್ ಕಾಯಿಲೆ ಹರಡುತ್ತದೆ. ಸಾಕು ನಾಯಿಗಳಿಗೆ ತಪ್ಪದೆ ರೇಬಿಸ್ ಲಸಿಕೆ ಹಾಕಿಸಬೇಕು. ನಾಯಿ ಕಡಿದ ತಕ್ಷಣವೇ ಸಾಬೂನು-ನೀರಿನಿಂದ 15 ನಿಮಿಷ ತೊಳೆಯಬೇಕು. ನಾಯಿ ಕಚ್ಚಿದ ಗಾಯಕ್ಕೆ ಮಣ್ಣು, ಅರಿಷಿನ ಪುಡಿ, ವೀಳ್ಯದೆಲೆ, ಸುಣ್ಣದಂತಹ ವಸ್ತುಗಳನ್ನು ಹಚ್ಚಬಾರದು ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ,  ಸಾಕು ನಾಯಿ ಅಥವಾ ಬೀದಿ ನಾಯಿಗಳು ಹತ್ತಿರ ಬಂದಾಗ ಅವುಗಳನ್ನು ನಾವು ಗಾಬರಿಗೊಳಿಸಬಾರದು. ಗಾಬರಿಗೊಳಿಸಿದಾಗ ಮಾತ್ರ ಅವುಗಳು ಭಯಪಟ್ಟು ಕಚ್ಚುತ್ತವೆ ಎಂದರು.

ಪಪಂ ಸದಸ್ಯ ಶಿವಕುಮಾರ್ ಮಾತನಾಡಿ, ನಾಯಿ ಕಡಿದ ತಕ್ಷಣ ಗಾಬರಿಗೊಳ್ಳದೆ ಹತ್ತಿರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಚಿಕ್ಕ ಚಿಕಿತ್ಸೆ ಪಡೆದರೆ ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂದರು.

ಶ್ವಾನ ಪ್ರಿಯ ಜಿ.ಆ‌ರ್.ರಮೇಶಗೌಡ ಮಾತನಾಡಿ, ನಿಯತ್ತಿನ ಪ್ರಾಣಿ ನಾಯಿ, ಒಂದು ದಿನ ಆಹಾರ ನೀಡಿದರೆ ಪ್ರಾಣ ನೀಡುವವರೆಗೆ ನಿಯತ್ತು ತೋರುತ್ತದೆ. ರೇಬಿಸ್ ವೈರಾಣು ನಾಯಿಗಳಲ್ಲಿ ಕಾಣುವ ಮುನ್ನ ವ್ಯಾಕ್ಸಿನ್ ಪ್ರತಿ ವರ್ಷ ಹಾಕಿಸುವುದು ಸೂಕ್ತೆಂದರು.

ಪಾಪಂ ಸದಸ್ಯ ಮಹಮದ್ ಮಾತನಾಡಿ, ಗುಬ್ಬಿ ಪಟ್ಟಣದಲ್ಲಿ ಕೋರ್ಟ್ ಆವರಣದಲ್ಲಿ ನಡೆದ ಘಟನೆ ಯಿಂದ ಪಟ್ಟಣ ಪಂಚಾಯತಿಯು ತುರ್ತು ಸಭೆ ಕರೆದು  ನಾಯಿಗಳನ್ನು ಒಂದು ಕಡೆ ಕೂಡಿ ಚುಚ್ಚುಮದ್ದು ಹಾಕಿ ಅಲ್ಲೇ ಆಹಾರ ನೀಡುವ ವ್ಯವಸ್ಥೆಯನ್ನು ಸಂತೆ ಮೈದಾನದ ಹತ್ತಿರ ಮಾಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಉತ್ತಮವಾಗಿ ನಾಯಿ ಸಾಕಿರುವಂತಹ ವ್ಯಕ್ತಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಯುಷಾ ತಾಸೀನ್, ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಕೀರ್ತಿ ರಾಜ್, ಸಿದ್ದಪ್ಪ ಬಿ ಗುಜ್ಜರಿ, ಜಿ.ಬಿ. ಮಲ್ಲಪ್ಪ, ಶ್ವಾನ ಪ್ರೇಮಿ ಜಿ.ಆರ್.ರಮೇಶ್, ಪಪಂ ಮುಖ್ಯಾಧಿಕಾರಿ ಮಂಜುಳದೇವಿ, ಡಾ.ಪುರುಷೋತ್ತಮ, ಡಾ.ಪುಷ್ಪಲತಾ, ಡಾ. ಶಶಿಕಲಾ, ಡಾ. ನಂಜೇಗೌಡ, ಡಾ. ನಾಗಭೂಷಣ್, ಡಾ. ಭಾನುಪ್ರಕಾಶ್ ಸಾರ್ವಜನಿಕರು, ಶ್ವಾನಪ್ರಿಯರು ಇತರರು ಇದ್ದರು.

LEAVE A REPLY

Please enter your comment!
Please enter your name here