ತುಮಕೂರು: ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಕೊರಟಗೆರೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ನೇ.ರಂ. ನಾಗರಾಜು, ಪ್ರಧಾನ ಕಾರ್ಯದರ್ಶಿಯಾಗಿ ಗುಬ್ಬಿಯ ಎಸ್.ಆರ್.ಎ. ಕಾಲೇಜು ಪ್ರಾಚಾರ್ಯ ಸಿ.ಜಿ ಸತೀಶ್, ಖಜಾಂಚಿಯಾಗಿ ತಿಪಟೂರು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಶಿವಕುಮಾರ್ ಆಯ್ಕೆಯಾದರು.
ಈ ಸಂದರ್ಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲಗುರುಮೂರ್ತಿಯವರು ಸಂಘದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಆಯ್ಕೆಯಾಗಿರುವ ಅಧ್ಯಕ್ಷರು ಅನುಭವಿಗಳು ಹಾಗೂ ಆಡಳಿತಗಾರರಾಗಿರುವುದರಿಂದ ಉತ್ತಮ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಾರೆ. ಎಲ್ಲರ ಸಹಕಾರ ಪಡೆದು ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬರಲು ಶ್ರಮಿಸಬೇಕು ಎಂದು ಹೇಳಿದರು .
ನೂತನ ಅಧ್ಯಕ್ಷ ನೇ.ರಂ.ನಾಗರಾಜು ಮಾತನಾಡಿ, ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಸಮಸ್ಯೆಗಳನ್ನು ಬಗೆಹರಿಸಿ, ಮುಂಬರುವ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಎಲ್ಲರೂ ಯೋಜಿತವಾಗಿ ಶ್ರಮಿಸೋಣ. ಈ ಬಾರಿ ಜಿಲ್ಲೆಯ ಪಿಯುಸಿ ಫಲತಾಂಶ ರಾಜ್ಯದಲ್ಲಿ 10ರ ಒಳಗಿನ ಸ್ಥಾನ ಪಡೆಯಲು ಎಲ್ಲಾ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ರೆಡ್ಡಿ, ರಾಜ್ಯ ಸಮಿತಿ ಸದಸ್ಯ ಜಯರಾಮ್, ಜಿಲ್ಲಾ ಅನುದಾನಿತ ಪದವಿಪೂರ್ವ ಕಾಲೇಜುಗಳ ಸಂಘದ ಅಧ್ಯಕ್ಷ ಪರಮೇಶ್ವರ್, ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಚಂದ್ರಯ್ಯ, ಅಕ್ಕಮ್ಮ, ಪುಟ್ಟಸ್ವಾಮಯ್ಯ ಇತರರು ಇದ್ದರು.