
ಗುಬ್ಬಿ: ಪ್ರತಿ ರೈತರಿಂದ ಒಂದು ಎಕರೆಗೆ 10ಕ್ವಿಂಟಾಲ್ ನಂತೆ ಗರಿಷ್ಠ 50 ಕ್ವಿಂಟಾಲ್‌ಗಳನ್ನು ಮೀರದಂತೆ ಹಾಗೂ ಆಹಾರ ಗುಣಮಟ್ಟ ಮಾನದಂಡಗಳಂತೆ ಉತ್ತಮ ಗುಣಮಟ್ಟದ ರಾಗಿಯನ್ನು ಮಾತ್ರ ಖರೀದಿಸಲಾಗುವುದು ಎಂದು ಜಿಲ್ಲಾ ವ್ಯವಸ್ಥಾಪಕ ತನ್ವೀರ್ ತಿಳಿಸಿದರು.
ಪಟ್ಟಣದ ಎಪಿಎಂಸಿ ಯಾರ್ಡ್ ನಲ್ಲಿ ನೂತನವಾಗಿ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುಬ್ಬಿ ತಾಲೂಕಿನಿಂದ 2334 ರೈತರು ನೋಂದಣಿಯಾಗಿದ್ದು, ಒಟ್ಟು 64053 ಕ್ವಿಂಟಲ್ ರಾಗಿ ಖರೀದಿಸಲಾಗುತ್ತದೆ. ಒಂದು ಕ್ವಿಂಟಲ್ ರಾಗಿಗೆ 4886 ರೂ ಬೆಂಬಲ ಬೆಲೆ ನೀಡಲಾಗುತ್ತದೆ. ರೈತರು ರಾಗಿ ಖರೀದಿ ಕೇಂದ್ರಕ್ಕೆ ರಾಗಿಯನ್ನು ತರುವಾಗ ಸರ್ಕಾರ ನಿಗದಿಪಡಿಸಿದ ಗುಣಮಟ್ಟದ ರಾಗಿಯನ್ನು ತರಬೇಕು. ಕಡ್ಡಾಯವಾಗಿ ರೈತರೇ ರಾಗಿ ಖರೀದಿ ಕೇಂದ್ರಕ್ಕೆ ಬಂದು ಎರಡು ಬಾರಿ ಬಯೋಮೆಟ್ರಿಕ್ ಕೋಡಬೇಕು. ಒಂದು ಬಾರಿ ನೊಂದಣಿ ವೇಳೆಯಲ್ಲಿ ಇನ್ನೊಂದು ಬಾರಿ ಖರೀದಿ ವೇಳೆಯಲ್ಲಿ ಹಾಗಾಗಿ ನೊಂದಾಯಿತ ರೈತರೇ ಖರೀದಿ ಕೇಂದ್ರಗಳಿಗೆ ರಾಗಿ ತರುವುದು ಕಡ್ಡಾಯವಾಗಿರುತ್ತದೆ.

ರೈತರು ನೋಂದಣಿ ಮಾಡಿಕೊಂಡಿರುವ ದಿನಾಂಕದ ಆಧಾರದ ಮೇಲೆ ಸೀನಿಯರಿಟಿ ಮೇಲೆ ನಾವು ಅವರಿಗೆ ಮಾಹಿತಿಯನ್ನು ನೀಡಲಾಗುತ್ತದೆ. ಅನಗತ್ಯವಾಗಿ ರಾಗಿ ಕೇಂದ್ರಕ್ಕೆ ಬಂದು ತಮ್ಮ ಸಮಯವನ್ನು ವ್ಯರ್ಥ ಮಾಡಿ ಕೊಳ್ಳಬೇಡಿ. ರಾಗಿ ಕೇಂದ್ರಕ್ಕೆ ಬಂದಂತಹ ರೈತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ.
2025-26 ನೇ ಸಾಲಿನ ಸರ್ಕಾರದ ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ರಾಗಿ ಖರೀದಿ ಮಾಡಲು ಖರೀದಿ ಕೇಂದ್ರವನ್ನು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ, ತುಮಕೂರು ಜಿಲ್ಲೆ ಇವರಿಂದ ತೆರೆಯಲಾಗಿದೆ.

ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಸರ್ಕಾರ ಮತ್ತು ಜಿಲ್ಲಾಡಳಿತ, ತಾಲೂಕು ಆಡಳಿತ ತೀರ್ಮಾನ ಮಾಡಿ ಒಂದೆರೆಡು ತಿಂಗಳು ಮೊದಲೇ ರಾಗಿ ಖರೀದಿ ಕೇಂದ್ರ ತೆರೆಯಬೇಕಿತ್ತು. ಏಕೆಂದರೆ ರೈತರು ಒಕ್ಕಣೆ ಕೆಲಸ ಡಿಸೆಂಬರ್ ಒಳಗೆ ಮುಗಿಯುವುದರಿಂದ ರೈತರು ಸಕಾಲಕ್ಕೆ ಸರಿಯಾಗಿ ಖರೀದಿ ಕೇಂದ್ರಕ್ಕೆ ತಂದು ಬಿಡಲು ಸಾಧ್ಯವಾಗುತ್ತಿತ್ತು. ಇದು ಸರ್ಕಾರದ ವೈಫಲ್ಯ, ಪ್ರತಿಯೊಂದು ರೈತರ ಸೌಲಭ್ಯಗಳಿಗೆ ಒತ್ತಾಯ ಅಥವಾ ಹೋರಾಟ ಮಾಡಿ ಪಡೆಯುವಂತಹ ಪರಿಸ್ಥಿತಿ ಉಂಟಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಇದು ಕಡಿಮೆಯಾಗಿ ರೈತರೇ ನೇರವಾಗಿ ಮಾರಾಟ ಮಾಡುವಂತಹ ಪರಿಸ್ಥಿತಿ ಉಂಟಾಗಬೇಕು ಎಂದು ತಿಳಿಸಿದರು.

ಕಾರ್ಯದರ್ಶಿ ಸಿ.ಜಿ.ಲೋಕೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ವರ್ಷವಿಡಿ ರಾಗಿ ಖರೀದಿ ಕೇಂದ್ರವನ್ನು ತೆಗೆದರೆ ರೈತರಿಗೆ ಅನುಕೂಲವಾಗುತ್ತದೆ. ಯಾವುದೇ ಮೋಸವಿಲ್ಲದೆ ರೈತರಿಂದ ನಿಗದಿ ಪಡಿಸಿದ ತೂಕದ ರಾಗಿಯನ್ನು ಮಾತ್ರ ಖರೀದಿ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಪಂ ಮಾಜಿ ಸದಸ್ಯ ಜಿ.ಆರ್.ಶಿವಕುಮಾರ್, ರೈತ ಮುಖಂಡರಾದ ಗಂಗರೇವಣ್ಣ, ಸುರೇಶ್, ರಾಗಿ ಖರೀದಿ ಅಧಿಕಾರಿ ಹೆಚ್. ಟಿ.ಲತಾ , ಗುಣಮಟ್ಟ ಪರೀಕ್ಷಕ ಬಸವರಾಜು, ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ, ಆಹಾರ ನೀರಿಕ್ಷಕರಾದ ವೀಣಾ, ಸಿದ್ದೇಗೌಡ, ಎಪಿಎಂಸಿ ಸಿಬ್ಬಂದಿಗಳು, ರೈತರು ಇತರರು ಇದ್ದರು.






