
ಗುಬ್ಬಿ : ತಾಲ್ಲೂಕಿನ ಸಿ ಎಸ್ ಪುರ ಹೋಬಳಿಯ ಮಣಿಕುಪ್ಪೆ ಗ್ರಾಮದಲ್ಲಿ ಹನುಮ ಜಯಂತಿ, ಕನ್ನಡ ರಾಜ್ಯೋತ್ಸವ ಹಾಗೂ ಲಕ್ಷ ದೀಪೋತ್ಸವ ಮಂಗಳವಾರ ರಾತ್ರಿ ಅದ್ದೂರಿಯಾಗಿ ನಡೆಯಿತು. ಹಚ್ಚೇವು ಕನ್ನಡದ ದೀಪ ಹಾಡಿನೊಂದಿಗೆ ಗ್ರಾಮಸ್ಥರು ಲಕ್ಷ ದೀಪೋತ್ಸವವನ್ನು ಬೆಳಗಿಸಿದರು. ಹನುಮ ಜಯಂತಿಯ ಅಂಗವಾಗಿ ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀ ಆಂಜನೇಯಸ್ವಾಮಿಯ ಉತ್ಸವ ಮೆರವಣಿಗೆ ಊರಿನ ಪ್ರಮುಖ ರಾಜಬೀದಿಗಳಲ್ಲಿ ನಡೆಯಿತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಶ್ರೀ ನಾರಸಿಂಹ ಆಂಜನೇಯ ಸ್ವಾಮಿಯ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ವೆಂಕಟೇಶ್ ಮಾತನಾಡಿ ರಾಜ್ಯದ ನಾನಾ ಭಾಗಗಳಿಂದ ಹನುಮನ ರಥೋತ್ಸವ ಹಾಗೂ ಹನುಮ ಜಯಂತಿಗೆ ಭಕ್ತಾದಿಗಳು ಬಂದು ತಮ್ಮ ಹರಕೆಯನ್ನು ತೀರಿಸುವ ಪದ್ಧತಿ ಇದೆ . ಕಳೆದ 25 ವರ್ಷಗಳಿಂದ ಹನುಮ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಲಕ್ಷದೀಪೋತ್ಸವವನ್ನು ಆಚರಿಸುತ್ತಾ ಬರುತ್ತಿದ್ದೇವೆ. ವರ್ಷದ 350 ದಿನದಲ್ಲಿ 250 ದಿನ ರಾಜಬೀದಿಗಳಲ್ಲಿ ಹನುಮನ ಮೆರವಣಿಗೆ ನಡೆಯುತ್ತದೆ. ಇಲ್ಲಿಗೆ ಬಂದು ಬೇಡಿಕೊಂಡ ಭಕ್ತರಿಗೆ ನಾರಸಿಂಹಸ್ವಾಮಿ ಆಂಜನೇಯ ಸ್ವಾಮಿ ತುಂಬಾ ಒಳ್ಳೇದು ಮಾಡಿದ್ದಾರೆ ಎಂದು ತಿಳಿಸಿದರು.
ಕನ್ನಡ ಯುವಕರ ಸಂಘದ ಅಧ್ಯಕ್ಷ ಚಂದ್ರು ಮಾತನಾಡಿ ಪ್ರತಿ ವರ್ಷವೂ ನಾವು ಬೆಳಿಗ್ಗೆ ಕನ್ನಡ ರಾಜ್ಯೋತ್ಸವ ಮಾಡಿ ನಂತರ ಸಂಜೆ ಸ್ವಾಮಿಯ ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ನಿರಂತರ ಮಾಡಿಕೊಂಡು ಬರುತ್ತಿದ್ದೇವೆ. ಜೊತೆಗೆ ಇಲ್ಲಿಗೆ ಬಂದಂತಹ ಭಕ್ತಾದಿಗಳಿಗೆ ಬೆಳಗ್ಗೆಯಿಂದ ರಾತ್ರಿಯವರೆಗೂ ಮಹಾ ದಾಸೋಹ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದರು.

ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ನಾರಾಯಣ್, ವಾಸು, ಬಸವರಾಜು, ರಘು, ರಾಜು, ಕುಮಾರ್, ಶ್ರೀಕಂಠಮೂರ್ತಿ, ಕಾಡು ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ತಿಮ್ಮೆಗೌಡ, ಭವಾನಿ ಮಠದ ಕೃಷ್ಣೋಜಿರಾವ್, ಪ್ರಧಾನ ಅರ್ಚಕ ರಾಜು ಸೇರಿದಂತೆ ಇತರರು ಸುತ್ತ ಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.






