ಗುಬ್ಬಿ : ತಾಲೂಕಿನಲ್ಲಿ ಕೊಪ್ಪ ಗ್ರಾಮ ಪಂಚಾಯಿತಿ ಎನ್ಆರ್ಇಜಿ ಅತೀ ಹೆಚ್ಚು ಅನುದಾನ ಬಳಸಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ಕಚೇರಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಗ್ರಾಮ ಪಂಚಾಯಿತಿಗಳು ಜನರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದರೆ, ನಮಗೆ ಒತ್ತಡ ಕಡಿಮೆಯಾಗುತ್ತದೆ. ಮನೆಗೆ ನೀರು ಬರ್ಲಿಲ್ಲ ಅಂದ್ರು ನಂಗೆ ಫೋನ್ ಮಾಡ್ತಾರೆ, ಎಲ್ಲದಕ್ಕೂ ನಂಗೆ ಮಾಹಿತಿ ನೀಡುವ ಬದಲಿಗೆ, ಇಲ್ಲಿ ಆಗಬೇಕಾದ ಕೆಲಸ ನೀವೆ ಮಾಡಿದರೆ ಖಂಡಿತ ಹಳ್ಳಿಯ ಜನರಿಗೆ ಅನುಕೂಲವಾಗುತ್ತದೆ ಎಂದರು.
ಹಿಂದೆ ಸ್ಥಳೀಯ ಆಡಳಿತಕ್ಕೆ ತುಂಬಾ ಪವರ್ ಇತ್ತು, ಸ್ಥಳೀಯ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರ ನೀಡಲಾಗಿತ್ತು. ಆದರೆ ಈಗ ಅದರ ಹಿಡಿತ ತಪ್ಪಿದೆ. ಪ್ರಾಮಾಣಿಕವಾಗಿ ನಾವು ಕೆಲಸ ಮಾಡಿದರೆ ಖಂಡಿತವಾಗಿ ಉತ್ತಮ ಕೆಲಸ ಮಾಡಬಹುದಾಗಿದೆ. ಎಲ್ಲರೂ ಒಟ್ಟಾಗಿ ನಡೆದರೆ ಯಶಸ್ಸು ಸಾಧ್ಯ ಎಂಬುದಕ್ಕೆ ಕೊಪ್ಪ ಗ್ರಾಪಂ ಕಟ್ಟಡ ನಿರ್ಮಾಣವೇ ಉದಾಹರಣೆ ಎಂದು ತಿಳಿಸಿದರು.
ಈ ಭಾಗದಲ್ಲಿ ಹಲವು ರಸ್ತೆ ಕಾಮಗಾರಿ ನಡೆಯು ತ್ತಿದ್ದು, ಡಿಸೆಂಬರ್ ವೇಳೆಗೆ ಮತ್ತಷ್ಟು ಕಾಮಗಾರಿ ಕೈಗೆತ್ತಿ ಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕಲಾವತಿ ಹನುಮಂತರಾಜು, ಉಪಾಧ್ಯಕ್ಷೆ ಕವಿತ ಮಂಜುನಾಥ್, ಸದಸ್ಯರು, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಕೆ ಆರ್ ವೆಂಕಟೇಶ್, ಇಓ ರಂಗನಾಥ್, ಪಿಡಿಓ ಮಂಜುಳ, ಮುಖಂಡರಾದ ಕೆ ಎಸ್.ಸುರೇಶ್, ಮಂಜುನಾಥ್, ಗುರು ಇತರರು ಇದ್ದರು.





