ತುಮಕೂರು: ಆಧುನಿಕತೆ ಬೆಳೆದಂತೆ ಎಐ ಬಳಕೆ ಹೆಚ್ಚಾಗಿ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳುತ್ತಿವೆ   ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ನಗರದ ಬಡ್ಡಿಹಳ್ಳಿಯ ಒಕ್ಕಲಿಗರ ಸಭಾ ಭವನದಲ್ಲಿ ರಾಜ್ಯ ಒಕ್ಕಲಿಗರ ಸಂಘ, ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಆಶ್ರಯದಲ್ಲಿ ಏರ್ಪಡಿಸಿದ್ದ 15ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಶ್ರದ್ಧೆ ಇರುವಲ್ಲಿ ಸರಸ್ವತಿ ನೆಲೆಸಿರುತ್ತಾಳೆ. ಜ್ಞಾನ ಪಡೆಯಲು ಶ್ರದ್ಧೆ, ಛಲ ಮುಖ್ಯ ನಮ್ಮ ವಿದ್ಯಾರ್ಥಿಗಳು ಜ್ಞಾನವಂತರಾಗಿ ಉನ್ನತ ಸ್ಥಾನಮಾನಗಳ ಅವಕಾಶಗಳನ್ನು ಗಳಿಸಿಕೊಳ್ಳಬೇಕು. ಸಾಧನೆ ಮಾಡಿದವರಿಗೆ, ಸಂಸ್ಕಾರವಂತರಿಗೆ ಈ ಜಗತ್ತಿನಲ್ಲಿ ಬೆಲೆ ಇದ್ದೇಇರುತ್ತದೆ ಎಂದರು.

ಶಿಕ್ಷಣ ಕೇವಲ ಜ್ಞಾನ ಸಂಪಾದನೆ ಆಗಬಾರದು. ಆ ಮೂಲಕ ಸಂಸ್ಕಾರ, ಸನ್ನಡತೆಯನ್ನೂ ರೂಪಿಸುವಂತಾಗಬೇಕು. ನಡವಳಿಕೆ, ಸಂಸ್ಕಾರದಿಂದ ವ್ಯಕ್ತಿಯ ವ್ಯಕ್ತಿತ್ವ ಗುರುತಿಸಲಾಗುತ್ತದೆ. ಕೇವಲ ಪದವಿಗಳನ್ನು ಪಡೆದು ಒಳ್ಳೆಯ ಗುಣನಡತೆಗಳನ್ನು ರೂಪಿಸಿಕೊಳ್ಳದಿದ್ದರೆ ಆದರ್ಶ ವ್ಯಕ್ತಿಯಾಗಲು ಸಾಧ್ಯವೆ? ಮಕ್ಕಳ ಉತ್ತಮ ಭವಿಷ್ಯಕ್ಕಾಗಿ, ಅವರ ಉನ್ನತ ಬದುಕಿಗಾಗಿ ತಂದೆತಾಯಿ ಕನಸು ಕಾಣುತ್ತಾರೆ, ಅದಕ್ಕಾಗಿ ಶ್ರಮಪಟ್ಟಿರುತ್ತಾರೆ. ತಂದೆತಾಯಿಯು ಸಾಗಿಬಂದ ಹಾದಿ ಬಗ್ಗೆಯೂ ಮಕ್ಕಳು ತಿಳಿದುಕೊಳ್ಳಬೇಕು. ಅವರ ಶ್ರಮ, ಕನಸ್ಸಿಗೆ ಗೌರವ ಕೊಡಬೇಕು. ಸಂಬಂಧಗಳಿಗೆ ಬೆಲೆ ಕೊಡಬೇಕು. ಈ ರೀತಿಯ ಗುಣಗಳು ಶಿಕ್ಷಣದ ಜೊತೆಗೆ ಬರಬೇಕಾಗಿದೆ ಎಂದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಶ್ರೀಮಂತಿಕೆ ಎಲ್ಲರಲ್ಲೂ ಇರಬಹುದು ಆದರೆ ಅವರಲ್ಲಿ ಸಂಸ್ಕಾರ ಇರುತ್ತದೆಯೆ ಎಂಬುದು ಮುಖ್ಯ. ಶಿಕ್ಷಣದಲ್ಲಿ ಪದವಿ ಪಡೆಯುವುದೇ ಮುಖ್ಯವಲ್ಲ, ಸಂಸ್ಕಾರವನ್ನೂ ಪಡೆಯಬೇಕು. ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಸಮಾಜ ಮೆಚ್ಚುವಂತಹ ವ್ಯಕ್ತಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಉನ್ನತ ಶಿಕ್ಷಣದಿಂದ ಉತ್ತಮ ಬದುಕು ರೂಪಿಸಿಕೊಳ್ಳುವುದರ ಜೊತೆಗೆ ಉತ್ತಮ ವ್ಯಕ್ತಿತ್ವವನ್ನೂ ರೂಢಿಸಿಕೊಳ್ಳುವುದೂ ಮುಖ್ಯವಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಸಂಸ್ಕಾರವಂತ ಕಲಿಕೆಯ ಅಗತ್ಯವೂ ಇದೆ. ಶಿಕ್ಷಕರು, ಪೋಷಕರು, ನಮ್ಮ ಪರಿಸರ ಮಕ್ಕಳಲ್ಲಿ ಇಂತಹ ವ್ಯಕ್ತಿತ್ವ ರೂಪಿಸಲು ನೆರವಾಗಬೇಕಾಗಿದೆ ಎಂದು ಹೇಳಿದರು.

ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ಉನ್ನತ ಶಿಕ್ಷಣ ಬದುಕು ಕಟ್ಟಿಕೊಡುತ್ತದೆ. ಸಮಾಜದಲ್ಲಿ ಗೌರವ ತಂದುಕೊಡುತ್ತದೆ. ಅಂತಹ ಸಮಾಜಕ್ಕೆ ನೆರವಾಗುವ ರೀತಿಯಲ್ಲಿ ಸಮಾಜಮುಖಿಯಾಗಿ ಬದುಕಬೇಕಾಗಿದೆ. ನಮ್ಮ ಒಕ್ಕಲಿಗ ಸಮಾಜವು ಅನೇಕ ಮಹನೀಯರನ್ನು ನಾಡಿಗೆ ಕೊಟ್ಟಿದೆ. ಮತ್ತಷ್ಟು ಮಹನೀಯರ ಸೃಷ್ಟಿಗೆ ನಮ್ಮಲ್ಲಿ ವೇದಿಕೆ ಸೃಷ್ಠಿಯಾಗಬೇಕು ಎಂದು ಹೇಳಿದರು.

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ತಂದೆತಾಯಿಯರು ತಮ್ಮ ಮಕ್ಕಳಿಗೆ ಕೇಳಿದ್ದನ್ನೆಲ್ಲ ಸುಲಭವಾಗಿ ಕೊಡಿಸಬಾರದು, ಅವರಿಗೆ ಕಷ್ಟದ ಅನುಭವ ಮಾಡಿಸಬೇಕು. ಆಗಲೇ ಯಾವುದಾದರ ಬೆಲೆ ಅವರಿಗೆ ಅರ್ಥವಾಗುವುದು. ದುಂದುವೆಚ್ಚ ಮಾಡದೆ ಸರಳವಾಗಿ ಬದುಕುವ ಗುಣಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಸಮಾಜಪರ ಚಿಂತನೆಗಳನ್ನು ಅವರಲ್ಲಿ ತುಂಬಬೇಕು ಎಂದು ಹೇಳಿದರು.

ಈ ವೇಳೆ ಜಿಲ್ಲೆಯ 450ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಆದಿಚುಂಚನಗಿರಿ ಸಂಸ್ಥಾನ ಶಾಖಾಮಠದ ಮಂಗಳಾನಾಥ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಸಹ ಕಾರ್ಯದರ್ಶಿ ಹನುಮಂತರಾಯಪ್ಪ, ಜಿಲ್ಲಾ ಒಕ್ಕಲಿಗರ ನೌಕರರ ವೇದಿಕೆ ಅಧ್ಯಕ್ಷ ಟಿ.ಪುಟ್ಟಸ್ವಾಮಿ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕ ಹೆಚ್.ನಿಂಗಪ್ಪ, ಕೌಶಲ್ಯಾಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಮುರಳಿಧರ ಹಾಲಪ್ಪ,  ಸಂಘದ ಖಜಾಂಚಿ ಎನ್.ಬಾಲಕೃಷ್ಣ, ಮುಖಂಡರಾದ ಕೃಷ್ಣಯ್ಯ, ಟಿ.ಆರ್.ಚಿಕ್ಕರಂಗಣ್ಣ, ಕೆ.ಬಿ.ಬೋರೇಗೌಡ, ಭೈರವ ಗಿರೀಶ್, ದೊಡ್ಡಲಿಂಗಪ್ಪ, ಒಕ್ಕಲಿಗರ ನೌಕರರ ವೇದಿಕೆ ಗೌರವಾಧ್ಯಕ್ಷ ಸಿ.ಶಿವಣ್ಣ, ಉಪಾಧ್ಯಕ್ಷರಾದ ಎ.ಸಿ.ಹನುಮಂತರಾಯಪ್ಪ, ಕೆ.ಲೀಲಾವತಿ, ಪ್ರಧಾನ ಕಾರ್ಯದರ್ಶಿ ಡಾ.ಜಿ.ವಿ.ಗೋಪಾಲ್, ಸಹಕಾರ್ಯದರ್ಶಿ ರುಕ್ಮಿಣಿ, ಖಜಾಂಚಿ ಕೆ.ಎ.ಮಂಜುಳಾ ಉಮಾಶಂಕರ್ ಸೇರಿದಂತೆ ಒಕ್ಕಲಿಗ ಸಮಾಜದ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here