ಗುಬ್ಬಿ : ಶಿಕ್ಷಕರು ಬೋಧನೆ ಮಾಡುವ ಜೊತೆಗೆ ಪೋಷಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ಕುಳಿತು ಅಭ್ಯಾಸ ಮಾಡುವುದನ್ನು ಕಲಿಸಿದಾಗ ಮಾತ್ರ ಮಕ್ಕಳು ಹೆಚ್ಚು ಕಲಿಯಲು ಸಾಧ್ಯವಾಗುತ್ತದೆ ಎಂದು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಿ.ಜಿ ಲೋಕೇಶ್ ತಿಳಿಸಿದರು.

ತಾಲೂಕಿನ ಕಸಬ ಹೋಬಳಿ ಚಿಕ್ಕೋನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಶಾಲಾ ವಾರ್ಷಿಕೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡ ಮಾತನಾಡಿದ ಅವರು, ಅಭ್ಯಾಸ ಮಾಡಲು ಯಶಸ್ಸಿನ ಮೊದಲ ಮೆಟ್ಟಿಲು ಸಮಯದ ನಿರ್ವಹಣೆ. ಪ್ರತಿಯೊಂದು ವಿಷಯಕ್ಕೂ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಕೊಳ್ಳುವುದು ಮತ್ತು ಅದನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಬಹಳ ಮುಖ್ಯ. ಪೋಷಕರು ಮಕ್ಕಳ ಕೈಗೆ ಮೊಬೈಲ್ ಕೊಡುವುದನ್ನು ನಿಲ್ಲಿಸಿ ಪುಸ್ತಕಗಳನ್ನ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಟಿವಿ ಮತ್ತು ಮೊಬೈಲ್ ಚಾಟಕ್ಕೆ ಬಲಿಯಾದರೆ ಮುಂದಿನ ಜೀವನವು ಕಷ್ಟಕರ ವಾಗುತ್ತದೆ ಎಂದು ಹೇಳಿದರು.

ಸಿ ಆರ್ ಪಿ ಲೋಕೇಶ್ ಮಾತನಾಡಿ, ತಾಲೂಕಿನಾದ್ಯಂತ ಸರ್ಕಾರಿ ಶಾಲೆಗಳಲ್ಲಿ ದ್ವಿ ಭಾಷಾ ಅಧ್ಯಯನ ಇರುವುದರಿಂದ ಪೋಷಕರುಗಳು ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ವಿದ್ಯಾಭ್ಯಾಸಕ್ಕೆ ಹಣದ ವೆಚ್ಚವನ್ನು  ಕಡಿಮೆ ಮಾಡಿಕೊಳ್ಳಿ ಎಂದು ತಿಳಿಸಿದರು.

ಇಸಿಒ  ನಿಜಾನಂದಮೂರ್ತಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಇರುವ ತುಂಬಾ ಉದಾಹರಣೆಗಳನ್ನು ಕಾಣಬಹುದು. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಸರ್ಕಾರಿ ಶಾಲೆಯಲ್ಲಿ ಓದಿದಂತಹ ಹಳೆ ವಿದ್ಯಾರ್ಥಿಗಳು ಶಾಲೆಗೆ ಒಂದಲ್ಲ ಒಂದು ರೀತಿಯ ಕೊಡುಗೆಗಳನ್ನು ನೀಡುವ ಮೂಲಕ ಶಾಲೆಯ ಋಣವನ್ನು ತೀರಿಸಬೇಕು ಎಂದರು.

ತಾಲ್ಲೂಕು ದೈಹಿಕ ಶಿಕ್ಷಕರ ಪರಿವೀಕ್ಷಕ  ರಮೇಶ್  ಮಾತನಾಡಿ ಸರ್ಕಾರಿ ಶಾಲೆಗಳ ಸಬಲೀಕರಣವು ಅತ್ಯಂತ ಮುಖ್ಯವಾಗಿದ್ದು, ಗ್ರಾಮಸ್ಥರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಬಲಿಯಾಗದೆ ತಮ್ಮ ಗ್ರಾಮದಲ್ಲಿರುವ ಶಾಲೆಗೆ ಮಕ್ಕಳನ್ನು ಸೇರಿಸಿದರೆ ಇಲ್ಲೂ ಸಹ ಒಂದೆನೇ ತರಗತಿಯಿಂದ  ಇಂಗ್ಲಿಷ್ ಕಲಿಸುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಉಳಿವಿಗಾಗಿ  ಗ್ರಾಮಸ್ಥರೆಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ಯಜಮಾನ ಮುಳಕಟ್ಟಯ್ಯ, ಗ್ರಾಪಂ ಮಾಜಿ ಉಪಾಧ್ಯಕ್ಷ ರಾಜಣ್ಣ , ಬಿ ಆರ್ ಬಿ ರೇಣುಕಾ ಪ್ರಸಾದ್, ಮುಖ್ಯ ಶಿಕ್ಷಕಿ ಗಿರಿಜಾ, ಕವಿತ,ಜಗದೀಶ್, ಮೋಹನ, ರವೀಶ್,ಮುಖಂಡರಾದ ಬೆಟ್ಟಸಿದ್ದಯ್ಯ, ಕೃಷ್ಣಪ್ಪ, ಆಣೆಕಾರ್ ರಾಜಣ್ಣ , ಬ್ಯಾಟರಾಜು, ಪ್ರಕಾಶ್, ಸಿದ್ದಪ್ಪ, ಹುಚ್ಚಪ್ಪ, ಶಿವರುದ್ರಯ್ಯ, ನಾಗರಾಜು, ಕೇಶವ್, ಕಾರ್ಪೆಂಟರ್ ಮೂರ್ತಿ, ಉಮಾದೇವಿ, ರಾಧ, ಹಳೆ ವಿದ್ಯಾರ್ಥಿ ಸಂಘದ ಎಲ್ಲಾ ಪದಾಧಿಕಾರಿಗಳು, ಎಸ್ ಡಿ ಎಂ ಸಿ ಎಲ್ಲಾ ಪದಾಧಿಕಾರಿಗಳು, ಗ್ರಾಮಸ್ಥರು, ಪೋಷಕರು, ವಿದ್ಯಾರ್ಥಿಗಳು ಇತರರು ಇದ್ದರು.

LEAVE A REPLY

Please enter your comment!
Please enter your name here