
ಗುಬ್ಬಿ: ಜೇನು ಸಾಕಾಣಿಕೆ ಆರಂಭಿಸುವ ಮುನ್ನ ಸರಿಯಾದ ತರಬೇತಿ ಪಡೆದು ಮತ್ತು ಜೇನುನೊಣಗಳ ಪೆಟ್ಟಿಗೆಯನ್ನು ಹೂವುಗಳು ಹೆಚ್ಚಿರುವ ಪ್ರದೇಶದಲ್ಲಿ ಇಡುವುದು ಸೂಕ್ತ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಎ.ಎಸ್.ಪುಷ್ಪಲತ ತಿಳಿಸಿದರು.
ಪಟ್ಟಣದ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆಗೆ ಹಾಗೂ ತೋಟಗಾರಿಕೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಆತ್ಮ ಯೋಜನೆಯಡಿ ಜೇನು ಕೃಷಿ ತರಭೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಜೇನುನೊಣಗಳು ಅತ್ಯುತ್ತಮ ಪರಾಗಸ್ಪರ್ಶಕಗಳಿಂದ ಬೆಳೆಯಲ್ಲಿ ಇಳುವರಿ ಹೆಚ್ಚಾಗಿ ರೈತರಿಗೆ ಲಾಭವಾಗುತ್ತದೆ. ಗ್ರಾಮೀಣ ಭಾಗದ ಮಹಿಳೆಯರು ಮತ್ತು ನಿರುದ್ಯೋಗಿ ಯುವಕರಿಗೆ ಇದು ಉತ್ತಮ ಸ್ವಯಂ ಉದ್ಯೋಗ. ಸರ್ಕಾರವು ಜೇನು ಸಾಕಾಣಿಕೆಗೆ ಸಬ್ಸಿಡಿ ಮತ್ತು ತರಬೇತಿಯನ್ನು ಕೂಡ ನೀಡುತ್ತದೆ. ಜೇನುನೊಣಗಳು ಸಸ್ಯವರ್ಗದ ಬೆಳವಣಿಗೆಗೆ ಸಹಾಯ ಮಾಡುವ ಮೂಲಕ ಜೀವವೈವಿಧ್ಯತೆಯನ್ನು ಕಾಪಾಡುತ್ತವೆ ಎಂದರು.

ಜೇನು ತರಭೇತಿದಾರ ಶ್ರೀಧರ್ ಮಾತನಾಡಿ, ಜೇನು ಯಾವಾಗ ಪ್ರಚಲಿತವಾಗಿತು ಎಂದು ತಿಳಿಸಿ, ರೈತರು ತಮ್ಮ ಮುಖ್ಯ ಕೃಷಿಯ ಜೊತೆಗೆ ಜೇನು ಸಾಕಾಣಿಕೆ ಮಾಡುವ ಮೂಲಕ ವರ್ಷವಿಡೀ ಆದಾಯ ಪಡೆಯಬಹುದು. ಜೇನು ಸಾಕಾಣಿಕೆ ಮಾಡಲು ಹೆಚ್ಚು ಜಮೀನು ಅಥವಾ ದೊಡ್ಡ ಯಂತ್ರೋಪಕರಣಗಳ ಅಗತ್ಯವಿಲ್ಲ. ಅಲ್ಪ ಹೂಡಿಕೆಯಲ್ಲಿ ಮನೆಯ ಹಿತ್ತಲಿನಲ್ಲಿಯೂ ಪ್ರಾರಂಭಿಸಬಹುದು. ಜೇನುನೊಣಗಳು ಹೂವಿನಿಂದ ಹೂವಿಗೆ ಹಾರುವುದರಿಂದ ಪರಾಗಸ್ಪರ್ಶ ಕ್ರಿಯೆ ಉತ್ತಮವಾಗಿ ನಡೆಯುತ್ತದೆ. ಸೂರ್ಯಕಾಂತಿ, ಸಾಸಿವೆ, ತೆಂಗು, ಅಡಿಕೆ ಮತ್ತು ವಿವಿಧ ಹಣ್ಣಿನ ತೋಟಗಳಲ್ಲಿ ಇಳುವರಿಯು ಶೇಕಡ 20 ರಿಂದ 30 ರಷ್ಟು ಹೆಚ್ಚಾಗುತ್ತದೆ. ಎಲ್ಲಾ ಜೇನುಗಳು ತಿನ್ನಲು ಯೋಗ್ಯವಲ್ಲ ಅದ್ದರಿಂದ ತಾವುಗಳು ಜೇನು ಸಾಕಿ ಉತ್ತಮ ತುಪ್ಪವನ್ನು ಸೇವಿಸಬೇಕು ಎಂದರು.

ತರಬೇತಿಯಲ್ಲಿ ಆತ್ಮ ಯೋಜನೆಯ ಅಧಿಕಾರಿ ಪೂಜಾ, ಹರೀಶ್, ನಿವೃತ್ತ ಅದಿಕಾರಿ ನಂಜುಂಡಯ್ಯ, ಬಿಟಿ ಗಿರೀಶ್ ಕುಮಾರ್, ಡಿ.ಲೋಕೇಶ, ಗೋಪಾಲ್ ಫಲಾನುಭವಿ ರೈತರು ಇತರರು ಇದ್ದರು.





