
ಗುಬ್ಬಿ : ಪಟ್ಟಣದ ಶ್ರೀ ಗುರುನಾಗಲಿಂಗೇಶ್ವರ ಸ್ವಾಮಿಯ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಸೋಮವಾರ ಮಧ್ಯಾಹ್ನ 12:40ಕ್ಕೆ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಜಾತ್ರೆ ಅಂಗವಾಗಿ ಬೆಳಗಿನ ಜಾವದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ಲಕ್ಷ ಬಿಲ್ವಾರ್ಚನೆ ಮತ್ತು ಅಮ್ಮನವರಿಗೆ ವಿಶೇಷ ಬಳೆ ಅಲಂಕಾರ ನಂತರ ಭಕ್ತರ ಹರಕೆ ತುಲಾಭಾರ ಸೇವೆ, ಶ್ರೀಗಣಪತಿ ಹೋಮ, ಶ್ರೀ ನವಗ್ರಹ, ರುದ್ರಹೋಮ, ಮಹಾರುದ್ರಭಿಷೇಕ ನಡೆದವು.

ಬೆಳಗ್ಗೆ 5.30ರಿಂದ 6.30ರವರೆಗೆ ಶ್ರೀಗುರು ನಾಗಲಿಂಗೇಶ್ವರಸ್ವಾಮಿ ಹಾಗೂ ಪಾರ್ವತಮ್ಮನವರ ಶ್ರೀ ಗಿರಿಜಾ ಶಂಕರ ಕಲ್ಯಾಣ ಮಹೋತ್ಸವ ನಡೆಯಿತು. ಶ್ರೀ ಗುರುನಾಗಲಿಂಗೇಶ್ವರಸ್ವಾಮಿ ಹಾಗೂ ಪಾರ್ವತಮ್ಮನವರ ರಥೋತ್ಸವ ನಂತರ ಪ್ರಸಾದ ವಿನಿಯೋಗ ನಡೆಯಿತು.
ನೂತನವಾಗಿ ನಿರ್ಮಿಸಿರುವ ಕಲ್ಯಾಣಿಯನ್ನು ಗೋಡೆಕೆರೆ ಮಠದ ಮೃತ್ಯುಂಜಯ ದೇಶಿಕೇಂದ್ರ ಮಹಾಸ್ವಾಮಿ, ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ದೇಶಿ ಕೇಂದ್ರ ಮಹಾಸ್ವಾಮಿಗಳು, ಬೆಳ್ಳಾವಿ ಶ್ರೀ ಶ್ವೇತ ಕಮಟಾಪುರಿ ಜಂಗಮ ಮಠದ ಶ್ರೀ ಕಾರದ ವೀರಬಸವ ಮಹಾಸ್ವಾಮಿಗಳು, ಬಿ.ಕೋಡಿಹಳ್ಳಿ ಬಸವಬೃಂಗೀಶ್ವರ ಮಠದ ಶ್ರೀ ಬಸವ ಬೃಂಗೀಶ್ವರ ಮಹಾಸ್ವಾಮಿಗಳು, ತೊರೆಮಠದ ಶ್ರೀ ಅಟವಿ ಚನ್ನಬಸವ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಿದರು.

ರಥೋತ್ಸವ ಸಮಯದಲ್ಲಿ ಹಗರನಹಳ್ಳಿ ಶ್ರೀ ವಿದ್ಯಾಚೌಡೇಶ್ವರಿ ದೇವಸ್ಥಾನದ ಶ್ರೀ ಬಸವಣ್ಣನ ದರ್ಶನವನ್ನು ಭಕ್ತರು ಪಡೆದರು. ಕುಂಭಕಳಸವನ್ನು ಮುತ್ತೈದೆ ಹೆಣ್ಣು ಮಕ್ಕಳು ಮಡಿಯಿಂದ ಹೊತ್ತು ಜಾತ್ರೆಗೆ ಮೆರವ ನೀಡಿದರು. ದೇವರ ಉತ್ಸವವನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ, ಲಿಂಗದವೀರರ ಕುಣಿತ, ನಂದಿಧ್ವಜ ಕುಣಿತ ಹಾಗೂ ಬಸವನ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಉತ್ಸವ ನಡೆಯಿತು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ಜಿ.ಸಾನಂದಕುಮಾರ್ ಹಾಗೂ ಶ್ರೀ ಗುರುನಾಗಲಿಂಗೇಶ್ವರಸ್ವಾಮಿ ಸೇವಾ ಸಮಿತಿ ಟ್ರಸ್ಟ್ ಎಲ್ಲಾ ಪದಾಧಿಕಾರಿಗಳು ಹಾಗೂ ಗುಬ್ಬಿ ನಗರದ ಸಾರ್ವಜನಿಕರು, ಸಾವಿರಾರು ಭಕ್ತರು ಉಪಸ್ಥಿತರಿದ್ದರು.





