ಗುಬ್ಬಿ: ಆಧುನಿಕತೆ ಬೆಳೆದಂತೆ ಶಿಕ್ಷಣಕ್ಕೆ ಹೆಚ್ಚಿನ ಮಾನ್ಯತೆ ದೊರೆತಿದೆ. ಈ ನಿಟ್ಟಿನಲ್ಲಿ ಅಂಕ ಗಳಿಕೆಗೆ ಹೆಚ್ಚಿನ ಪ್ರಾಧಾನ್ಯತೆ ದೊರಕಿದೆ. ಸಾಮಾನ್ಯ ಮೀಸಲಿಗೆ ಶೇಕಡಾ 98 ಕ್ಕೆ ನಿಂತಿದೆ. ಪರಿಶಿಷ್ಟ ವರ್ಗಕ್ಕೆ 92 ಕ್ಕೆ ಬಂದಿದೆ. ಇವೆಲ್ಲಾ ಸ್ಪರ್ಧಾತ್ಮಕ ಜಗತ್ತಿನ ಪ್ರತಿಷ್ಠೆಯಾಗಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನಲ್ಲಿ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆ, ರೋವರ್‌ ಮತ್ತು ರೇಂಜ‌ರ್, ಯುವ ರೆಡ್‌ಕ್ರಾಸ್ ಐ.ಕ್ಯೂ.ಎ.ಸಿ., ಎನ್.ಸಿ.ಸಿ. ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಸ್ತು ಸಂಯಮ ಜೊತೆಗೆ ಶಿಕ್ಷಣ ಕಲಿಯಲು ಗುರಿ ಇಟ್ಟುಕೊಂಡು ಬದ್ಧತೆಯಲ್ಲಿ ಕಲಿಯಬೇಕು ಎಂದರು.

ಹದಿಹರೆಯದ ವಯಸ್ಸಿನ ಮಕ್ಕಳು ಈಗ ಒಳ್ಳೆಯದು ಕೆಟ್ಟದ್ದು ಅರಿಯುವ ಮನಸ್ಥಿತಿಯಲ್ಲಿ ಇರುವುದಿಲ್ಲ. ಭವಿಷ್ಯ ರೂಪಿಸಿಕೊಳ್ಳುವ ಈ ಸಮಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟು ಬದುಕು ಕಟ್ಟಿಕೊಳ್ಳಬೇಕು. ಈ ಹಿಂದೆ ಶಿಕ್ಷಣಕ್ಕೆ ಯಾವ ಅನುಕೂಲ ಇರಲಿಲ್ಲ. ಗ್ರಾಮೀಣ ಭಾಗದಲ್ಲಿ ಶಾಲೆಗಳು ಇರಲಿಲ್ಲ. ಆದರೆ ಈಗ ಎಲ್ಲಾ ಸವಲತ್ತು ಜೊತೆಗೆ ಶಿಕ್ಷಣಕ್ಕೆ ಸೂಕ್ತ ವಾತಾವರಣ ಸರ್ಕಾರ ಒದಗಿಸಿದೆ. ಈ ಅನುಕೂಲ ಪಡೆದು ಉತ್ತಮ ಶಿಕ್ಷಣ ಪಡೆದು ಉನ್ನತ ವ್ಯಾಸಂಗಕ್ಕೆ ಸಿದ್ಧವಾಗಬೇಕು. ಹಾದಿ ತಪ್ಪುವ ಈ ವಯಸ್ಸಿಗೆ ಲಗಾಮು ಹಾಕಿ ವಿಧ್ಯಾಭ್ಯಾಸಕ್ಕೆ ಮಾತ್ರ ಮಾನ್ಯತೆ ನೀಡಿ ನಿಮ್ಮ ಪೋಷಕರ ಆಸೆಗಳನ್ನು ಈಡೇರಿಸಿ ಎಂದು ಕರೆ ನೀಡಿದರು.

ಹಿರಿಯ ಸಾಹಿತಿಗಳು ತುಂಬಾಡಿ ರಾಮಯ್ಯ ಮಾತನಾಡಿ ಕನ್ನಡ ಸಾಹಿತ್ಯ ಲೋಕ ಪಡೆದ ಹಿರಿಮೆ ಗರಿಮೆಗಳ ಬಗ್ಗೆ ವಿದ್ಯಾರ್ಥಿಗಳು ಅರಿಯಬೇಕು. ಕಾಲೇಜು ಶಿಕ್ಷಣ ಪಡೆಯುವ ಮಕ್ಕಳಲ್ಲಿ ಮಾತೃಭಾಷೆ ವ್ಯಾಮೋಹಕ್ಕೆ ಹೆಚ್ಚು ಬೆಳೆಯಬೇಕು. ಕನ್ನಡ ನಾಡು ನುಡಿ ಸಂಸ್ಕೃತಿ ಉಳಿಸಿ ಬೆಳೆಸುವ ಕರ್ತವ್ಯ ಇಂದಿನ ಯುವಪೀಳಿಗೆ ಕೈಯಲ್ಲಿದೆ. ಜೀವನ ರೂಪಿಸುವ ಈ ಕಾಲೇಜು ಶಿಕ್ಷಣ ಜೊತೆ ನಮ್ಮ ಮಾತೃಭಾಷೆ ಬಗ್ಗೆ ಅಪಾರ ಗೌರವ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

ತುಮಕೂರು ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ಮಾತನಾಡಿ ಕನ್ನಡದ ಜೊತೆಗೆ ಅನ್ಯ ಭಾಷೆಯನ್ನು ಕಲಿಯದಿದ್ದರೆ ಬೆಂಗಳೂರಿನಲ್ಲಿ ಜೀವನ ಮಾಡಲು ಆಗುವುದಿಲ್ಲ. ಮಕ್ಕಳನ್ನು ತಂದೆ ತಾಯಿಯು ನಂಬಿ ಹೊರಗಡೆ ಕಳಿಸುವುದು ಇಂದು ಕಷ್ಟ ಸಾಧ್ಯವಾಗಿದೆ. ವಿದ್ಯಾರ್ಥಿಗಳು ಉನ್ನತ ಅಭ್ಯಾಸ ಮಾಡಿ ತಂದೆತಾಯಿಗೆ ಗೌರವ ತಂದು ಕೊಡಬೇಕು. ಮಹಿಳೆಯಾಗಿ ಕುಟುಂಬದ ಅಭಿವೃದ್ದಿಗೆ ಸಹಕಾರ ಕೊಡಬೇಕು ಆಗ ಕುಟುಂಬ ಬೆಳೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಿಮಿಕ್ರಿ ಕಲಾವಿದ ಸಾಗರ್ ತುರುವೇಕೆರೆ ಮಿಮಿಕ್ರಿ ಮೂಲಕ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ವೇದಿಕೆಯಲ್ಲಿ ಪ್ರಾಂಶುಪಾಲ ಡಾ.ಪ್ರಸನ್ನ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಯಿಷಾ ತಾಸಿನ್, ಮಾಜಿ ಸದಸ್ಯ ಮಹಮದ್ ಸಾದಿಕ್, ಶೈಕ್ಷಣಿಕ ಡೀನ್ ಡಾ.ಓ.ನಾಗರಾಜು, ಪತ್ರಾಂಕಿತ ವ್ಯವಸ್ಥಾಪಕ ಎನ್.ಶಿವಯ್ಯ, ಸಾಂಸ್ಕೃತಿಕ ಕಾರ್ಯದರ್ಶಿ ಜಿ.ಗಂಗಾಧರ್, ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷರು, ಸದಸ್ಯರು, ಬೋಧಕರು ಹಾಗೂ ಬೋಧಕೇತರರು ಮತ್ತು ವಿದ್ಯಾರ್ಥಿ ವೃಂದ, ಹಳೆಯ ವಿದ್ಯಾರ್ಥಿಗಳ ಸಂಘ ಸದಸ್ಯರುಗಳು ಇತರರು ಇದ್ದರು.

LEAVE A REPLY

Please enter your comment!
Please enter your name here